ADVERTISEMENT

MiG-21 ಕೇವಲ ಯುದ್ಧವಿಮಾನವಲ್ಲ | ಭಾರತ-ರಷ್ಯಾ ಆಳವಾದ ಸಂಬಂಧಕ್ಕೆ ಸಾಕ್ಷಿ: ಸಚಿವ

ಪಿಟಿಐ
Published 26 ಸೆಪ್ಟೆಂಬರ್ 2025, 10:12 IST
Last Updated 26 ಸೆಪ್ಟೆಂಬರ್ 2025, 10:12 IST
   

ಚಂಡೀಗಢ: ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿದ್ದ ರಷ್ಯಾ ನಿರ್ಮಿತ ಮಿಗ್–21 ಯುದ್ಧ ವಿಮಾನವು ಇಂದು (ಶುಕ್ರವಾರ) ಕೊನೆಯ ಬಾರಿಗೆ ಹಾರಟ ನಡೆಸುವುದರೊಂದಿಗೆ ಇತಿಹಾಸದ ಪುಟ ಸೇರಿತು.

ಚಂಡೀಗಢದ ವಾಯುನೆಲೆಯಲ್ಲಿ 23 ಸ್ಕ್ವಾಡ್ರನ್‌ಗೆ ಸೇರಿದ ‘ಪ್ಯಾಂಥರ್ಸ್‌’ ಹೆಸರಿನ ಮಿಗ್‌–21 ಯುದ್ಧ ವಿಮಾನಕ್ಕೆ ಬೀಳ್ಕೊಡುಗೆ ಸಮಾರಂಭವನ್ನು ಇಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್, ಮಿಗ್ -21 'ದೇಶದ ಹೆಮ್ಮೆ' ಎಂದು ಬಣ್ಣಿಸಿದರು. ಅಲ್ಲದೇ ಮಿಗ್ -21 ಕೇವಲ ಯುದ್ಧ ವಿಮಾನವಲ್ಲ, ಅದು ಭಾರತ-ರಷ್ಯಾ ಆಳವಾದ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ADVERTISEMENT

‌‌ಮಿಗ್‌–21 ವಿಮಾನದ ಇತಿಹಾಸ ಅದ್ಭುತವಾಗಿದೆ. ಸುಮಾರು 11,000 ಯುದ್ಧವಿಮಾನಗಳು 60ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸಿವೆ. ಈ ಮೂಲಕ ಇತಿಹಾಸದಲ್ಲಿಯೇ ಅತಿ ಹೆಚ್ಚು ಉತ್ಪಾದನೆಯಾದ ಸೂಪರ್‌ಸಾನಿಕ್‌ ಯುದ್ಧವಿಮಾನ ಎಂಬ ಹೆಗ್ಗಳಿಕೆ ಪಡೆದಿದೆ. ಜಾಗತಿಕ ಮಿಲಿಟರಿ ವಾಯುಯಾನದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಯಾವುದೇ ಯುದ್ಧ ವಿಮಾನಗಳನ್ನು ತಯಾರಿಸಲಾಗಿಲ್ಲ. ಈ ಸಂಖ್ಯೆಯು ಈ ವಿಮಾನಗಳ ಜನಪ್ರಿಯತೆ, ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

1960ರ ದಶಕದಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮಿಗ್‌–21 ಯುದ್ಧ ವಿಮಾನಗಳು ಪಾಕಿಸ್ತಾನದೊಂದಿಗಿನ 1965 ಮತ್ತು 1971ರ ಯುದ್ಧದಲ್ಲಿ ಹಾಗೂ 1999ರ ಕಾರ್ಗಿಲ್‌ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. 2019ರ ಬಾಲಾಕೋಟ್‌ ವಾಯುದಾಳಿಯಲ್ಲಿಯೂ ಮಹತ್ವದ ಮಾತ್ರ ವಹಿಸಿದ್ದವು ಎಂದೂ ಅವರು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.