ADVERTISEMENT

Mig-21: ಇತಿಹಾಸದ ಪುಟ ಸೇರಿದ ಮಿಗ್‌–21

ಪಿಟಿಐ
Published 25 ಆಗಸ್ಟ್ 2025, 15:51 IST
Last Updated 25 ಆಗಸ್ಟ್ 2025, 15:51 IST
ಮಿಗ್‌–21
ಮಿಗ್‌–21   

ಬಿಕಾನೇರ್‌: ಆರು ದಶಕಗಳ ಕಾಲ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದ ಮಿಗ್‌–21 ಯುದ್ಧವಿಮಾನವು ರಾಜಸ್ಥಾನದ ಬಿಕಾನೇರ್‌ನಲ್ಲಿರುವ ನಾಲ್‌ ವಾಯುನೆಲೆಯಲ್ಲಿ ಕೊನೆಯ ಬಾರಿಗೆ ಹಾರಾಟ ನಡೆಸುವುದರೊಂದಿಗೆ ಇತಿಹಾಸದ ಪುಟ ಸೇರಿತು.

ಚಂಡೀಗಢದಲ್ಲಿ ಸೆಪ್ಟೆಂಬರ್‌ 26ರಂದು ಈ ಯುದ್ಧವಿಮಾನದ ಔಪಚಾರಿಕ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ.

ಸಾಂಕೇತಿಕ ಬೀಳ್ಕೊಡುಗೆಯ ಭಾಗವಾಗಿ ಆಗಸ್ಟ್‌ 18 ಮತ್ತು 19ರಂದು ಏರ್‌ ಚೀಫ್‌ ಮಾರ್ಷಲ್‌ ಎ.ಪಿ.ಸಿಂಗ್ ಅವರು ಮಿಗ್‌–21 ವಿಮಾನದ ಹಾರಾಟ ನಡೆಸಿದರು. 62 ವರ್ಷ ಸೇವೆ ಸಲ್ಲಿಸಿದ, ರಷ್ಯಾ ಮೂಲದ ಯುದ್ಧವಿಮಾನದ ಕೊನೆಯ ಹಾರಾಟವು ವಾಯುಪಡೆ ಮತ್ತು ಹಲವು ಪೀಳಿಗೆಯ ಪೈಲಟ್‌ಗಳಿಗೆ ಅತ್ಯಂತ ಭಾವನಾತ್ಮಕ ಗಳಿಗೆಯಾಗಿತ್ತು.

ADVERTISEMENT

ಬಳಿಕ ಮಾತನಾಡಿದ  ಎ.ಪಿ.ಸಿಂಗ್‌,  ‘ಮಿಗ್‌–21 ಅನ್ನು 1960ರ ದಶಕದಲ್ಲಿ ಸೇನೆಗೆ ನಿಯೋಜಿಸಲಾಗಿತ್ತು. ಸುಮಾರು 11,000 ಯುದ್ಧವಿಮಾನಗಳು 60ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸಿವೆ. ಈ ಮೂಲಕ ಇತಿಹಾಸದಲ್ಲಿಯೇ ಅತಿ ಹೆಚ್ಚು ಉತ್ಪಾದನೆಯಾದ ಸೂಪರ್‌ಸಾನಿಕ್‌ ಯುದ್ಧವಿಮಾನ ಎಂಬ ಹೆಗ್ಗಳಿಕೆ ಪಡೆದಿದೆ’ ಎಂದು ಹೇಳಿದರು.

‘ಮಿಗ್‌–21 ವಾಯುಪಡೆಗೆ ಸಲ್ಲಿಸಿದ ಸೇವೆ ಅಪಾರ. ಆದರೆ ತಂತ್ರಜ್ಞಾನವು ಈಗ ಅಪ್ರಸ್ತುತವಾಗಿದೆ ಮತ್ತು ನಿರ್ವಹಣೆ ಕಷ್ಟವಾಗಿದೆ. ನೂತನ ತಂತ್ರಜ್ಞಾನ ಒಳಗೊಂಡ ತೇಜಸ್‌, ರಪೇಲ್‌ಗಳನ್ನು ಅಳವಡಿಸಿಕೊಳ್ಳಲು ಇದು ಸಕಾಲ’ ಎಂದರು.

‘ಮಿಗ್‌–21 ವಿಮಾನವು 1971ರ ಯುದ್ಧದ ಸಂದರ್ಭದಲ್ಲಿ ಅದರಲ್ಲೂ ಮುಖ್ಯವಾಗಿ ಡಿಸೆಂಬರ್‌ 14ರಂದು ಢಾಕಾದ ಗವರ್ನರ್‌ ನಿವಾಸದ ಮೇಲಿನ ದಾಳಿ ಸಂದರ್ಭದಲ್ಲಿ ಅತಿಮುಖ್ಯ ಪಾತ್ರ ವಹಿಸಿತ್ತು. ಮರುದಿನವೇ ಗವರ್ನರ್‌ ರಾಜೀನಾಮೆ ಸಲ್ಲಿಸಿದರು ಮತ್ತು ಪಾಕಿಸ್ತಾನ ಶರಣಾಗತಿಯಾಯಿತು’ ಎಂದು ಐಎಎಫ್‌ ವಕ್ತಾರ ವಿಂಗ್‌ ಕಮಾಂಡರ್‌ ಜೈದೀಪ್ ಸಿಂಗ್‌ ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.