ADVERTISEMENT

ಗುಜರಾತ್‌ನಲ್ಲಿ ವಲಸೆ ಕಾರ್ಮಿಕರ ಮೇಲೆ ಮುಂದುವರಿದ ಹಲ್ಲೆ: ಬಿಹಾರದ ವ್ಯಕ್ತಿಯ ಕೊಲೆ

ಏಜೆನ್ಸೀಸ್
Published 13 ಅಕ್ಟೋಬರ್ 2018, 6:35 IST
Last Updated 13 ಅಕ್ಟೋಬರ್ 2018, 6:35 IST
   

ಸೂರತ್: ಗುಜರಾತ್‌ನಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಹಲ್ಲೆ ಮುಂದುವರಿದಿದ್ದು, ಸೂರತ್‌ನಲ್ಲಿ ಬಿಹಾರದ ಅಮರ್‌ಜೀತ್ ಸಿಂಗ್ ಎಂಬುವವರನ್ನು ಹೊಡೆದು ಸಾಯಿಸಲಾಗಿದೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಸಿಂಗ್ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ರಾಜ್ಯದ ಸಬರ್‌ಕಾಂತಾ ಪಟ್ಟಣದಲ್ಲಿ 14 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಿಹಾರ ಮೂಲದ ಕಾರ್ಮಿಕನೊಬ್ಬನನ್ನು ಈಚೆಗೆ ಪೊಲೀಸರು ಬಂಧಿಸಿದ್ದರು. ನಂತರದ ದಿನಗಳಲ್ಲಿ ವಲಸೆ ಕಾರ್ಮಿಕರ ವಿರುದ್ಧದ ಪ್ರತಿಭಟನೆ, ಹಲ್ಲೆಗಳು ಹೆಚ್ಚಾಗಿದೆ.

ಅಮರ್‌ಜೀತ್ ಅವರು ಸೂರತ್‌ನ ಪಾಂಡೇಶ್ವರದಲ್ಲಿರುವ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. 17 ವರ್ಷ ವಯಸ್ಸಿನವರಾಗಿದ್ದಾಗಲೇ ಗುಜರಾತ್‌ಗೆ ವಲಸೆ ಬಂದಿದ್ದ ಇವರು ಸ್ವಂತ ಮನೆಯೊಂದನ್ನೂ ನಿರ್ಮಿಸಿಕೊಂಡಿದ್ದರು. ಇವರು ಮೂಲತಹ ಬಿಹಾರದ ಗಯಾ ಜಿಲ್ಲೆಯವರು.

ರಾಜ್ಯದಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಹಲ್ಲೆಗೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಮೃತರ ತಂದೆ ರಾಜ್‌ದೇವ್ ಸಿಂಗ್ ಗುಜರಾತ್ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮತ್ತೊಂದು ಕುಟುಂಬದವರು ತನ್ನಂತೆ ಮಗನನ್ನು ಕಳೆದುಕೊಳ್ಳುವಂತಾಗಬಾರದು ಎಂದು ಅವರು ಹೇಳಿದ್ದಾರೆ.

ಹಲ್ಲೆ ಭೀತಿಯಿಂದ ಈವರೆಗೆ 50 ಸಾವಿರ ವಲಸಿಗರು ರಾಜ್ಯ ತೊರೆದಿದ್ದಾರೆ. 70ರಷ್ಟು ಹಲ್ಲೆ ಪ್ರಕರಣಗಳು ನಡೆದಿವೆ. ಸುಮಾರು 600 ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.