ADVERTISEMENT

ವೇತನ ಇಲ್ಲದೇ ವಲಸೆ ಕಾರ್ಮಿಕರ ಪರದಾಟ

ಪಿಟಿಐ
Published 5 ಏಪ್ರಿಲ್ 2020, 19:45 IST
Last Updated 5 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಿದ ನಂತರ, ರಾಷ್ಟ್ರ ರಾಜಧಾನಿಯಲ್ಲಿ ದುಡಿಯುತ್ತಿರುವ ಕಾರ್ಮಿಕರು ತೊಂದರೆಗೆ ಸಿಲುಕಿದರು. ಲಕ್ಷಾಂತರ ಜನರು ದೆಹಲಿ ತೊರೆದು, ತಮ್ಮ ಊರುಗಳತ್ತ ಹೆಜ್ಜೆ ಹಾಕಿದರು.

ಆದರೆ, ದೆಹಲಿಯಲ್ಲಿಯೇ ಉಳಿದುಕೊಂಡಿರುವ ಕಾರ್ಮಿಕರು ಈಗ ಮತ್ತಷ್ಟೂ ತೊಂದರೆ ಅನುಭವಿಸುತ್ತಿದ್ದಾರೆ. ಏನೇ ಆಗಲಿ ಇಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಉಳಿದಿದ್ದರೂ, ಈಗ ಖರ್ಚಿಗೆ ಹಣ ಸಿಗದೇ ಅತಂತ್ರರಾಗಿದ್ದಾರೆ.

‘ನಾನು ದೆಹಲಿಯಲ್ಲಿಯೇ ಉಳಿಯುವ ಮೂಲಕ ತಪ್ಪು ಮಾಡಿದೆ. ಈಗ ಹೊರಗೆ ಹೋಗುವಂತಿಲ್ಲ. ಇದರಿಂದ ಇಷ್ಟು ದಿನ ದುಡಿದದ್ದಕ್ಕೆ ಪ್ರತಿಯಾಗಿ ನಮ್ಮ ವೇತನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಮನೆಗೆಲಸ ಮಾಡುವ ಮಹಿಳೆ ಮಮತಾ ವಿಷಾದದಿಂದ ಹೇಳುತ್ತಾರೆ.

ADVERTISEMENT

ತೋಟದಲ್ಲಿ ಕೂಲಿ ಮಾಡುತ್ತಿರುವ ಭೀಮ್‌ಸಿಂಗ್‌, ಮನೆಗೆಲಸ ನೆಚ್ಚಿರುವ ಮೇಘಾ ಸೇರಿದಂತೆ ಇಲ್ಲಿ ಉಳಿದುಕೊಂಡಿರುವವರ ಸ್ಥಿತಿಯೂ ಇದೆ ಆಗಿದೆ.

‘ಕೊರೊನಾ ಹರಡುತ್ತಿರುವ ಕಾರಣ ಯಾರನ್ನೂ ಹೊರಗೆ ಬಿಡುತ್ತಿಲ್ಲ ಎಂಬುದೇನೋ ಸರಿ. ಆದರೆ, ನಾವು ಬಡವರು. ನಮ್ಮನ್ನು ಅಸ್ಪೃಶ್ಯರಂತೆ ನೋಡಲಾಗುತ್ತಿದೆ. ನನ್ನ ಹಳ್ಳಿಗೆ ಹೋಗದೇ ಯಾಕಾದರೂ ಇಲ್ಲಿ ಉಳಿದುಕೊಂಡೆ ಎಂದು ದುಃಖಿಸುತ್ತಿದ್ದೇನೆ’ ಎಂಬುದು ಪಶ್ಚಿಮ ಬಂಗಾಳದ ದುರ್ಗಾಪುರದ ಮೇಘಾ ಅವರ ಅಳಲು.

‘ಸಂಕಷ್ಟದಲ್ಲಿರುವ ಇಂತಹ ಕಾರ್ಮಿಕರಿಗೆ ಅವರು ಇರುವ ಸ್ಥಳಕ್ಕೇ ಕೂಲಿ ಹಣ ಅಥವಾ ಧನಸಹಾಯ ತಲುಪಬೇಕು. ಪಡಿತರವೂ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಕಾರ್ಯದರ್ಶಿ ಕವಿತಾ ಕೃಷ್ಣನ್‌ ಹೇಳುತ್ತಾರೆ.

‘ಲಾಕ್‌ಡೌನ್‌ನಂತಹ ಕಠಿಣ ಕ್ರಮಗಳನ್ನು ಜನರ ಮೇಲೆ ಹೇರುವ ಮುನ್ನ ಸರ್ಕಾರ ಸಮರ್ಪಕ ತಯಾರಿ ಮಾಡಿಕೊಳ್ಳುವುದು ಮುಖ್ಯ’ ಎಂದು ಸೆಂಟರ್‌ ಫಾರ್‌ ಸೋಷಿಯಲ್‌ ರಿಸರ್ಚ್‌ನ ನಿರ್ದೇಶಕಿ ರಂಜನಾ ಕುಮಾರಿ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.