ADVERTISEMENT

ಮುಂಬೈನ ಬಾಂದ್ರಾ ನಿಲ್ದಾಣದ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ದಿನಗೂಲಿ ವಲಸಿಗರು

ಲಾಕ್‌ಡೌನ್‌ಗೆ ವಿರೋಧ: ತಮ್ಮ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 14:16 IST
Last Updated 14 ಏಪ್ರಿಲ್ 2020, 14:16 IST
ಮುಂಬೈನ ಬಾಂದ್ರಾ ರೈಲ್ವೇ ನಿಲ್ದಾಣದ ಬಳಿ ಸೇರಿರುವ ದಿನಗೂಲಿ ವಲಸಿಗರು
ಮುಂಬೈನ ಬಾಂದ್ರಾ ರೈಲ್ವೇ ನಿಲ್ದಾಣದ ಬಳಿ ಸೇರಿರುವ ದಿನಗೂಲಿ ವಲಸಿಗರು    

ಮುಂಬೈ: ಕರೋನ ವೈರಸ್‌ ನಿಯಂತ್ರಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿರುವ ನಿರ್ಧಾರದಿಂದ ಕೆರಳಿರುವವಲಸೆ ಕಾರ್ಮಿಕರು, ದಿನಗೂಲಿಗಳು ಮಂಗಳವಾರ ಮುಂಬೈನ ಬಾಂದ್ರಾ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.

‘ಲಾಕ್‌ಡೌನ್‌ ವಿಸ್ತರಿಸಿರುವುದು ಸರಿಯಲ್ಲ. ನಮ್ಮ ಬದುಕು ದುಸ್ತರವಾಗಿದೆ. ನಮ್ಮೂರಿಗೆ ನಮ್ಮನ್ನು ಕಳುಹಿಸಲು ವ್ಯವಸ್ಥೆ ಮಾಡಿ,’ ಎಂಬ ಆಗ್ರಹದೊಂದಿಗೆ ರಸ್ತೆಗಿಳಿದ ಸಾವಿರಾರು ಮಂದಿಯನ್ನು ಪೊಲೀಸರು ಲಾಠಿ ಪ್ರಯೋಗಿಸಿ ಚದುರಿಸಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

‘ಮುಂಬೈನ ಪಟೇಲ್‌ ನಗರಿ ಕೊಳೆಗೇರಿಯಲ್ಲಿ ವಾಸವಾಗಿರುವ ಸಾವಿರಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರು ಮಂಗಳವಾರ ಮಧ್ಯಾಹ್ನ ಬಾಂದ್ರಾದ ರೈಲ್ವೇ ನಿಲ್ದಾಣದ ಸಮೀಪದ ಪಶ್ಚಿಮ ಬಸ್‌ ಡಿಪೋಟ್‌ ಬಳಿ ಜಮಾಯಿಸಿದರು. ತಮ್ಮ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಬೇಕು,’ ಎಂದು ಆಗ್ರಹಿಸಿದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಪ್ರತಿಭಟನೆಗೆ ಮುಂದಾಗಿದ್ದವರೆಲ್ಲರೂ ಉತ್ತರ ಪ್ರದೇಶ ಮತ್ತು ಪಶ್ಚಿಮಬಂಗಾಳ ಮೂಲದವರು ಎಂದು ಹೇಳಲಾಗಿದೆ.
ಇನ್ನು ಈ ಕುರಿತು ಮಾತನಾಡಿರುವ ಹೆಸರು ಹೇಳಲಿಚ್ಚಿಸದ ವಲಸೆ ಕಾರ್ಮಿಕರೊಬ್ಬರು, ’ಎನ್‌ಜಿಒಗಳು ನಮಗೆ ಆಹಾರವನ್ನೇನೋ ನೀಡುತ್ತಿವೆ. ಆದರೆ, ಬಹುತೇಕರು ಈ ಸನ್ನಿವೇಶದಲ್ಲಿ ತಮ್ಮ ಊರು ಸೇರಿಕೊಳ್ಳಲು ಬಯಸುತ್ತಿದ್ದಾರೆ. ಲಾಕ್‌ಡೌನ್‌ ನಮ್ಮ ಬದುಕನ್ನು ದುಸ್ತರಗೊಳಿಸಿದೆ,’ ಎಂದು ಹೇಳಿದ್ದಾರೆ.

‘ನಮಗೆ ಈಗ ಬೇಕಿರುವುದು ಆಹಾರವಲ್ಲ. ನಾವು ನಮ್ಮ ಊರುಗಳಿಗೆ ಹೋದರೆ ಸಾಕು. ಲಾಕ್‌ಡೌನ್‌ ವಿಸ್ತರಣೆಯ ನಿರ್ಧಾರ ನಮಗೆ ಸರಿಕಾಣಲಿಲ್ಲ’ ಎಂದು ಅವರು ಹೇಳಿದರು.

ನಮ್ಮ ಬಳಿ ಇದ್ದ ಉಳಿತಾಯದ ದುಡ್ಡನ್ನು ಲಾಕ್‌ಡೌನ್‌ನ ಮೊದಲ ಹಂತದಲ್ಲಿ ಖರ್ಚು ಮಾಡಿಕೊಂಡಿದ್ದೇವೆ. ನಮಗೆ ಈಗ ತಿನ್ನಲು ಏನೂ ಇಲ್ಲ. ನಾವು ನಮ್ಮ ಊರುಗಳಿಗೆ ಹೋಗಬೇಕೆಂದಿದ್ದೇವೆ. ಸರ್ಕಾರವು ನಮ್ಮ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕು ಎಂದು ಪಶ್ಚಿಮ ಬಂಗಾಳದ ಮಾಲ್ಡಾ ಮೂಲದ ಕೂಲಿಕಾರರೊಬ್ಬರು ಹೇಳಿದ್ದಾರೆ.

ಲಾಕ್‌ಡೌನ್ ಘೋಷಣೆಯಾದಾಗಿನಿಂದ ದಿನಗೂಲಿ, ವಲಸೆ ಕಾರ್ಮಿಕರಿಗೆ ಆದಾಯ ಇಲ್ಲವಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಅನುಭವಿಸುತ್ತಿರುವ ಅವರು, ಜೀವನ ನಡೆಸಲು ಹೋರಾಟ ಮಾಡುವಂತಾಗಿದೆ.

ಸದ್ಯ ಮುಂಬೈ ಇಡೀ ದೇಶದಲ್ಲೇ ಕೊರೊನಾ ವೈರಸ್‌ ಹಾಟ್‌ಸ್ಪಾಟ್‌ ಎಂದು ಗುರುತಿಸಿಕೊಂಡಿದೆ. ದೇಶದ ನಗರಗಳ ಪೈಕಿ ಅತಿ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವುದು ಮುಂಬೈನಿಂದಲೇ. ಮುಂಬೈನಲ್ಲಿ 1,540 ಸೋಂಕು ಪ್ರಕರಗಳು ದೃಢವಾಗಿವೆ.ಅಲ್ಲಿನ ಕೊಳೆಗೇರಿಗಳಿಗೂ ಸೋಂಕು ವ್ಯಾಪಿಸಿರುವ ಈ ಹೊತ್ತಿನಲ್ಲೆ ದಿನಗೂಲಿ ವಲಸಿಗರು ಸಾವಿರಾರು ಸಂಖ್ಯೆಯಲ್ಲಿ ಒಂದೆಡೆ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.