ADVERTISEMENT

ಮ್ಯಾನ್ಮಾರ್‌ನಲ್ಲಿ ಅನಗತ್ಯ ಪ್ರಯಾಣ ಬೇಡ: ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ

ಪಿಟಿಐ
Published 2 ಫೆಬ್ರುವರಿ 2021, 12:40 IST
Last Updated 2 ಫೆಬ್ರುವರಿ 2021, 12:40 IST
ಮ್ಯಾನ್ಮಾರ್‌ನಲ್ಲಿ ಸೇನಾ ಕ್ಷಿಪ್ರ ದಂಗೆಯ ನಂತರ ಮಾಂಡಲೆಯ ರಸ್ತೆಯಲ್ಲಿ ಮಂಗಳವಾರ ಮಿಲಿಟರಿ ವಾಹನಗಳಲ್ಲಿ ಸೈನಿಕರು ಗಸ್ತು ತಿರುಗುತ್ತಿರುವುದು (ಎಸ್‌ಟಿಆರ್‌/ ಎಎಫ್‌ಪಿ ಚಿತ್ರ).
ಮ್ಯಾನ್ಮಾರ್‌ನಲ್ಲಿ ಸೇನಾ ಕ್ಷಿಪ್ರ ದಂಗೆಯ ನಂತರ ಮಾಂಡಲೆಯ ರಸ್ತೆಯಲ್ಲಿ ಮಂಗಳವಾರ ಮಿಲಿಟರಿ ವಾಹನಗಳಲ್ಲಿ ಸೈನಿಕರು ಗಸ್ತು ತಿರುಗುತ್ತಿರುವುದು (ಎಸ್‌ಟಿಆರ್‌/ ಎಎಫ್‌ಪಿ ಚಿತ್ರ).   

ನವದೆಹಲಿ: ಮ್ಯಾನ್ಮಾರ್‌ನಲ್ಲಿ ನಡೆದ ಕ್ಷಿಪ್ರ ಸೇನಾ ದಂಗೆ ಮತ್ತು ರಾಜಕೀಯ ಬೆಳವಣಿಗೆಯ ನಂತರ ಯಾಂಗೊನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು,ಮ್ಯಾನ್ಮಾರ್‌ನಲ್ಲಿ ನೆಲೆಸಿರುವ ಎಲ್ಲ ಭಾರತೀಯ ನಾಗರಿಕರಿಗೆ ಅನವಶ್ಯಕ ಪ್ರಯಾಣ ಕೈಬಿಡುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ.

ಸೋಮವಾರದ ದಿಢೀರ್‌ ಕಾರ್ಯಾಚರಣೆಯಲ್ಲಿ, ಅಲ್ಲಿನ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿರುವ ಸೇನೆ, ಅಧಿಕಾರವನ್ನು ತನ್ನ ವಶಕ್ಕೆ ಪಡೆದಿದೆ. ನೊಬೆಲ್‌ ಪ್ರಶಸ್ತಿ ಪುರಸ್ಕೃತೆ ಆಂಗ್‌ ಸಾನ್‌ ಸೂಕಿ, ದಿ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷದ ನಾಯಕರನ್ನು ಬಂಧಿಸಿದ ನಂತರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.

‘ಮ್ಯಾನ್ಮಾರ್‌ನ ಇತ್ತೀಚಿನ ಬೆಳವಣಿಗೆಗಳ ದೃಷ್ಟಿಯಿಂದ, ಎಲ್ಲ ಭಾರತೀಯ ನಾಗರಿಕರು ಅನಗತ್ಯ ಪ್ರಯಾಣ ಕೈಬಿಡುವ ಜತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಅಗತ್ಯಬಿದ್ದರೆ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬಹುದು’ ಎಂದು ‘ಮ್ಯಾನ್ಮಾರ್‌ನಲ್ಲಿ ಇತ್ತೀಚಿನ ರಾಜಕೀಯ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಮ್ಯಾನ್ಮಾರ್‌ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ ಸಂದೇಶ’ ಎಂಬ ಶೀರ್ಷಿಕೆಯಡಿ ನೀಡಿರುವ ಸಲಹೆಯಲ್ಲಿ ರಾಯಭಾರ ಕಚೇರಿಯು ಎಚ್ಚರಿಸಿದೆ.

ADVERTISEMENT

ಭಾರತೀಯ ರಾಯಭಾರ ಕಚೇರಿ ಪ್ರಕಾರ, ಮ್ಯಾನ್ಮಾರ್‌ನಲ್ಲಿ ಸುಮಾರು 7 ಸಾವಿರ ಮಂದಿ ಅನಿವಾಸಿ ಭಾರತೀಯರು ನೆಲೆಸಿದ್ದಾರೆ. ಅಲ್ಲದೇ ಆ ದೇಶದಲ್ಲಿ ಭಾರತೀಯರ ಜನಸಂಖ್ಯೆ ಸುಮಾರು 1.5 ದಶಲಕ್ಷದಿಂದ 2.5 ದಶಲಕ್ಷದಷ್ಟು ಇದೆ.

ಭಾರತ ಕಳವಳ

ಮ್ಯಾನ್ಮಾರ್‌ನಲ್ಲಿನ ಈ ಬೆಳವಣಿಗೆಗೆ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತವು, ದೇಶದಲ್ಲಿ ಕಾನೂನು ನಿಮಯ ಮತ್ತು ಪ್ರಜಾಪ್ರಭುತ್ವ ಎತ್ತಿಹಿಡಿಯಬೇಕು ಎಂದು ಹೇಳಿದೆ.

‘ಭಾರತ ಕೂಡ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಜತೆಗೆ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಸ್ಥಿತ್ಯಂತರವನ್ನು ಬೆಂಬಲಿಸುವಲ್ಲಿ ಭಾರತ ಅಚಲವಾಗಿದೆ’ ಎಂದು ರಾಯಭಾರ ಕಚೇರಿ ಹೇಳಿದೆ.

ಮ್ಯಾನ್ಮಾರ್‌ನಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ‘ದಿ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ’ (ಎನ್‌ಎಲ್‌ಡಿ) ಪಕ್ಷವು ಅಭೂತಪೂರ್ವ ಜಯ ಸಾಧಿಸಿತ್ತು. ಆದರೂ ‘ಚುನಾವಣೆಯಲ್ಲಿ ವ್ಯಾಪಕವಾದ ಅಕ್ರಮಗಳು ನಡೆದಿವೆ’ ಎಂದು ಆರೋಪಿಸುತ್ತಲೇ ಸೇನೆ, ಚುನಾಯಿತ ಸರ್ಕಾರದ ವಿರುದ್ಧ ದಂಗೆ ಎದ್ದು, ಆಡಳಿತ ವಶಕ್ಕೆ ಪಡೆದಿದೆ.

ದಶಕಗಳ ಮಿಲಿಟರಿ ಆಡಳಿತದ ನಂತರ ಅಂದರೆ 2011ರಿಂದಲೇ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವದತ್ತ ಪರಿವರ್ತನೆ ಶುರುವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.