ADVERTISEMENT

ಚೀನಾ ಸಂಚಿನ ಬಗ್ಗೆ ಎಚ್ಚರ: ವಿದೇಶಾಂಗ ಸಚಿವ ಎಸ್‌. ಜೈಶಂಕರ್‌

ಪಿಟಿಐ
Published 23 ಫೆಬ್ರುವರಿ 2024, 14:49 IST
Last Updated 23 ಫೆಬ್ರುವರಿ 2024, 14:49 IST
<div class="paragraphs"><p>ಎಸ್‌. ಜೈಶಂಕರ್‌</p></div>

ಎಸ್‌. ಜೈಶಂಕರ್‌

   

ನವದೆಹಲಿ: ಭಾರತ–ಚೀನಾ ನಡುವಣ ವಿವಾದಗಳನ್ನು ದ್ವಿಪಕ್ಷೀಯ ಚೌಕಟ್ಟಿನೊಳಗೆ ನಿರ್ಬಂಧಿಸುವ ಚೀನಾದ ‘ಸಂಚಿ’ನ ಬಗ್ಗೆ ಭಾರತವು ಎಚ್ಚರದಿಂದಿರಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಉಭಯ ದೇಶಗಳ ಸಂಬಂಧವನ್ನು ‘ಸಮತೋಲನ’ ಸ್ಥಿತಿಗೆ ತರಲು ಜಾಗತಿಕವಾಗಿ ಲಭ್ಯವಿರುವ ಇತರ ಅವಕಾಶಗಳನ್ನು ಭಾರತವು ಬಿಟ್ಟುಕೊಡಬಾರದು ಎಂದು ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಅಭಿಪ್ರಾಯಪಟ್ಟರು.

ADVERTISEMENT

ಸಂಬಂಧದಲ್ಲಿ ‘ಸಮತೋಲನದ ಸ್ಥಿತಿ’ ಕಂಡುಕೊಳ್ಳುವುದು ಮತ್ತು ಅದನ್ನು ಕಾಪಾಡಿಕೊಂಡು ಹೋಗುವುದು ಉಭಯ ದೇಶಗಳ ಮುಂದಿರುವ ‘ಆತಿದೊಡ್ಡ ಸವಾಲು’ ಎಂದು ಹೇಳಿದರು. 

ಪೂರ್ವ ಲಡಾಖ್‌ ಗಡಿಯಲ್ಲಿ ಶಾಂತಿ ಕಾಪಾಡುವ ಸಂಬಂಧ ಇದ್ದ ಒಪ್ಪಂದದಿಂದ ಚೀನಾ ದೂರ ಸರಿದಿರುವುದರಿಂದ ಗಡಿ ವಿವಾದ ಉಲ್ಬಣಿಸಿರುವುದು, ತಕ್ಷಣದಲ್ಲೇ ಬಗೆಹರಿಯಬೇಕಾದ ಪ್ರಮುಖ ಸಮಸ್ಯೆಯಾಗಿದೆ ಎಂದು ಪ್ರತಿಪಾದಿಸಿದರು.

‘1980ರ ದಶಕದ ಕೊನೆಯಿಂದಲೂ ಪೂರ್ವ ಲಡಾಖ್‌ ಗಡಿಗೆ ಸಂಬಂಧಿಸಿದಂತೆ ನಮ್ಮ ನಡುವೆ ಸ್ಪಷ್ಟ ತಿಳಿವಳಿಕೆಯಿತ್ತು. ಅದರಿಂದಾಗಿ ಗಡಿಯಲ್ಲಿ ಶಾಂತಿ ನೆಲೆಸಿತ್ತು. ಇದೀಗ ಸುಮಾರು 30 ವರ್ಷಗಳ ಬಳಿಕ ಚೀನಾ ಆ ಒಪ್ಪಂದದಿಂದ ದೂರ ಸರಿದಿರುವುದರಿಂದ ಗಡಿಯಲ್ಲಿ ಸಂಘರ್ಷದ ಸ್ಥಿತಿ ನೆಲೆಸಿದೆ’ ಎಂದರು.

ವಿವಾದಗಳನ್ನು ‘ಕೇವಲ ನಮ್ಮಿಬ್ಬರ ನಡುವಿನ ವಿಚಾರ’ ಎಂದು ಬಿಂಬಿಸುವ ಮೂಲಕ ಇತರ ದೇಶಗಳನ್ನು ಹೊರಗಿಡಲು ಚೀನಾ ಪ್ರಯತ್ನಿಸುತ್ತಿದೆ. ಜಗತ್ತಿನಲ್ಲಿರುವ ಇತರ 190ಕ್ಕೂ ಅಧಿಕ ದೇಶಗಳಿಗೆ ನಮ್ಮಿಬ್ಬರ ನಡುವಣ ಸಂಬಂಧದಲ್ಲಿ ಯಾವುದೇ ಪಾತ್ರವಿಲ್ಲ ಎನ್ನುತ್ತಿದೆ. ಅದು ಚೀನಾದ ಸಂಚಿನ ಭಾಗವಷ್ಟೆ. ಏಕೆಂದರೆ, ಉಭಯ ದೇಶಗಳ ನಡುವಣ ಸಂಬಂಧ ಸುಧಾರಣೆಗೆ ಜಾಗತಿಕವಾಗಿ ಲಭ್ಯವಿರುವ ಇತರ ಅವಕಾಶಗಳನ್ನೂ ನಮಗೆ ಬಳಸಿಕೊಳ್ಳಬಹುದು. ನಾವು ಆ ಹಕ್ಕನ್ನು ಏಕೆ ತ್ಯಜಿಸಬೇಕು’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.