ಮುಂಬೈ: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಡೊಂಬಿವ್ಲಿ ಪಟ್ಟಣದಲ್ಲಿ ಬಾಲಕಿಯ ಮೇಲೆಕೆಲ ತಿಂಗಳುಗಳಿಂದ ಸತತವಾಗಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಈ ಸಂಬಂಧ ಮನ್ಪಾಡಾ ಪೊಲೀಸ್ ಠಾಣೆಯಲ್ಲಿ 29 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
‘14 ವರ್ಷದ ಬಾಲಕಿಯ ಮೇಲೆ ಜನವರಿ ಮತ್ತು ಆಗಸ್ಟ್ ತಿಂಗಳ ನಡುವೆ ಅತ್ಯಾಚಾರವೆಸಗಲಾಗಿದೆ. ಆಕೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದತ್ತ ಕಾರ್ಲೆ ಅವರು ತಿಳಿಸಿದರು.
‘ಬಾಲಕಿಯ ಪ್ರಿಯಕರ ಆಕೆಯ ಮೇಲೆ ಅತ್ಯಾಚಾರವೆಸಗಿ, ಅದನ್ನು ಚಿತ್ರೀಕರಿಸಿದ್ದಾನೆ. ಬಳಿಕ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಆ ವಿಡಿಯೊ ತೋರಿಸಿ ಸಂತ್ರಸ್ತೆಯನ್ನು ಬ್ಲ್ಯಾಕ್‌ಮೇಲೆ ಮಾಡಿ, ವಿವಿಧ ಸ್ಥಳಗಳಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ’ ಎಂದು ಅವರು ಹೇಳಿದರು.
ಈ ಸಂಬಂಧ ಸಂತ್ರಸ್ತೆಯು ಬುಧವಾರ ಬೆಳಿಗ್ಗೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ 29 ಮಂದಿಯ ಹೆಸರು ಪ್ರಸ್ತಾಪಿಸಿದ ಬಾಲಕಿ, ಕೆಲವು ಆರೋಪಿಗಳು ರಾಜಕೀಯ ವ್ಯಕ್ತಿಗಳೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
‘ಬಾಲಕಿಯ ಮೇಲೆ ಡೊಂಬಿವ್ಲಿ, ಅಂಬರನಾಥ್, ರಬಾಲೆ ಮತ್ತು ಮುರ್ಬಾದ್‌ನ ವಿವಿಧ ಸ್ಥಳಗಳಲ್ಲಿ ಅತ್ಯಾಚಾರವೆಸಗಲಾಗಿದೆ. ಈ ಸಂಬಂಧ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಹಲವು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಬಿಜೆಪಿ ಟೀಕೆ: ಈ ಘಟನೆ ಬಗ್ಗೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದೊಂದು ಆಘಾತಕಾರಿ ಘಟನೆ. ಇದರಿಂದ ನನಗೆ ತುಂಬಾ ನೋವಾಗಿದೆ.ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಇದು ಚಿಂತಾಜನಕ ವಿಷಯ. ಈ ರೀತಿಯ ಘಟನೆಗಳು ನಡೆಯದಂತೆ ಮಹಾರಾಷ್ಟ್ರ ಸರ್ಕಾರ ಗಮನವಹಿಸಬೇಕು ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.