ADVERTISEMENT

ಲಖನೌ: ಪಾಕ್‌ ಧ್ವಜದ ಮೇಲೆ ಮೂತ್ರ ವಿಸರ್ಜನೆ ಮಾಡಿಸಿದ ಗುಂಪು

ರಸ್ತೆಯಲ್ಲಿ ಬಿದ್ದಿದ್ದ ಪಾಕ್‌ ಧ್ವಜ ಕೈಗೆತ್ತಿಕೊಂಡ ಮುಸ್ಲಿಂ ಬಾಲಕನ ನಿಂದನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 16:07 IST
Last Updated 30 ಏಪ್ರಿಲ್ 2025, 16:07 IST
.
.   

ಲಖನೌ: ರಸ್ತೆಯಲ್ಲಿ ಬಿದ್ದಿದ್ದ ಪಾಕಿಸ್ತಾನದ ಧ್ವಜವನ್ನು ಕುತೂಹಲದಿಂದ ಕೈಗೆತ್ತಿಕೊಂಡ ಮುಸ್ಲಿಂ ಬಾಲಕನನ್ನು ಹಿಂದೂಪರ ಸಂಘಟನೆಯ ಕಾರ್ಯಕರ್ತರು ನಿಂದಿಸಿ, ಬಲವಂತವಾಗಿ ಧ್ವಜದ ಮೇಲೆ ಮೂತ್ರ ವಿಸರ್ಜನೆ ಮಾಡಿಸಿದ ಘಟನೆ ಉತ್ತರ ಪ್ರದೇಶದ ಆಲಿಗಢ ನಗರದಲ್ಲಿ ನಡೆದಿದೆ.

ಈ ವಿಡಿಯೊ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮುರಾದ್‌ ಎಂದು ಗುರುತಿಸಲಾದ 9ನೇ ತರಗತಿ ವಿದ್ಯಾರ್ಥಿಯಿಂದ ಬಲವಂತವಾಗಿ ಪಾಕ್‌ ಧ್ವಜದ ಮೇಲೆ ಮೂತ್ರವಿಸರ್ಜನೆ ಮಾಡಿಸಿದ ದೃಶ್ಯ ವಿಡಿಯೊದಲ್ಲಿದೆ. ಸೋಮವಾರವೇ ಘಟನೆ ನಡೆದಿದ್ದು, ತಡವಾಗಿ ವರದಿಯಾಗಿದೆ.

ವರದಿಗಳ ಪ್ರಕಾರ, ಸ್ನೇಹಿತರ ಜೊತೆ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿ ಮುರಾದ್‌, ನಗರದ ರಸಲ್‌ಗಂಜ್‌ ಸಮೀಪ ರಸ್ತೆಯಲ್ಲಿ ಬಿದ್ದಿದ್ದ ಧ್ವಜವನ್ನು ಕೈಗೆತ್ತಿಕೊಂಡಿದ್ದ. ಇದನ್ನು ಕೆಲ ಜನರು ನೋಡಿದ್ದರು. ಬಳಿಕ ವಿದ್ಯಾರ್ಥಿಯ ಹೆಸರು ಕೇಳಿದ ಅವರು ಅವಾಚ್ಯವಾಗಿ ನಿಂದಿಸಿದ್ದರು. ನಂತರ ಧ್ವಜದ ಮೇಲೆ ಮೂತ್ರ ವಿಸರ್ಜಿಸುವಂತೆ ಒತ್ತಾಯಿಸಿದ್ದರು. ಬಾಲಕನಿಗೆ ‘ಹಿಂದೂಸ್ತಾನ್‌ ಜಿಂದಾಬಾದ್‌’, ‘ಪಾಕಿಸ್ತಾನ್‌ ಮುರ್ದಾಬಾದ್‌’ ಎಂದು ಘೋಷಣೆ ಕೂಗುವಂತೆಯೂ ಒತ್ತಾಯಿಸಿದ್ದರು.

ADVERTISEMENT

‘ಕುತೂಹಲದಿಂದ ಧ್ವಜವನ್ನು ಕೈಗೆತ್ತಿಕೊಂಡೆ’ ಎಂದು ಬಾಲಕ ಪರಿಪರಿಯಾಗಿ ಬೇಡಿಕೊಂಡರೂ ಗುಂಪು ಆತನ ಮಾತಿಗೆ ಕಿವಿಗೊಡಲಿಲ್ಲ ಎಂದು ವರದಿಗಳು ತಿಳಿಸಿವೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ ಕೆಲವರು ಕೋಮು ಸೌಹಾರ್ದ ಕದಡಲು ಯತ್ನಿಸುತ್ತಿದ್ದಾರೆ
-ಮನೋಜ್‌ ಯಾದವ್‌, ಸಮಾಜವಾದಿ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.