‘ಮಿಸ್ ವರ್ಲ್ಡ್’ ಸ್ಪರ್ಧೆಯ ಸ್ಪರ್ಧಿಗಳು
ಪಿಟಿಐ ಚಿತ್ರ
ಹೈದರಾಬಾದ್: ಹೈದರಾಬಾದ್ ಸೇರಿದಂತೆ ತೆಲಂಗಾಣದ ಪ್ರಮುಖ ಸಾಂಸ್ಕೃತಿಕ ನಗರಗಳಲ್ಲಿ ‘ಮಿಸ್ ವರ್ಲ್ಡ್’ (ವಿಶ್ವ ಸುಂದರಿ) ಸ್ಪರ್ಧೆಯ 72ನೇ ಆವೃತ್ತಿಯು ಆರಂಭಗೊಂಡಿದೆ. ಇಂದು (ಶುಕ್ರವಾರ) ಮೆಹಬೂಬ್‌ನಗರ ಜಿಲ್ಲೆಯಲ್ಲಿರುವ ದೇಶದ ಹಳೆಯ ಪ್ರಸಿದ್ಧ ಆಲದ ಮರ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಮಿಸ್ ವರ್ಲ್ಡ್ ಸ್ಪರ್ಧಿಗಳು ಭೇಟಿ ನೀಡಿದ್ದಾರೆ.
700 ವರ್ಷದ ಹಳೆಯದಾದ ಆಲದ ಮರ ಸೇರಿದಂತೆ ಇತರೆ ಸ್ಥಳಗಳಿಗೆ ಸ್ಪರ್ಧಿಗಳು ಭೇಟಿ ನೀಡಿದರು. ಬಳಿಕ ಎಐಜಿ ಆಸ್ಪತ್ರೆಯಲ್ಲಿಗೆ ಭೇಟಿ ನೀಡಿದ್ದು, ಈ ವೇಳೆ ಅಲ್ಲಿನ ವೈದ್ಯರು ಸೂಪರ್-ಸ್ಪೆಷಾಲಿಟಿ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಐಜಿ ಆಸ್ಪತ್ರೆಯು ಮೆಡಿಕಲ್ ಹಬ್ ಆಗಿ ರೂಪುಗೊಳ್ಳುತ್ತಿದೆ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.
ತೆಲಂಗಾಣ ಸರ್ಕಾರವು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಸಲುವಾಗಿ ಜಾಗತಿಕ ಮಟ್ಟದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ‘ಮಿಸ್ ವರ್ಲ್ಡ್’ (ವಿಶ್ವ ಸುಂದರಿ) ಸ್ಪರ್ಧೆಯ 72ನೇ ಆವೃತ್ತಿಯು ಕಾರ್ಯಕ್ರಮವು ಇದರ ಭಾಗವಾಗಿದೆ.
ಪ್ರಸುತ್ತ ಮಿಸ್ ವರ್ಲ್ಡ್ ಸ್ಪರ್ಧಿಗಳು ರಾಜ್ಯದಾದ್ಯಂತ ಹಲವಾರು ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.
120 ದೇಶಗಳಿಂದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಮೇ 7ರಂದು ರೂಪದರ್ಶಿಯರು ಬಂದಿದ್ದಾರೆ. ಸ್ಪರ್ಧಿಗಳ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಪೊಲೀಸ್ ಆಯುಕ್ತ ಸಿ.ವಿ. ಆನಂದ್ ಹೇಳಿದ್ದಾರೆ.
ಮೇ 10ರಿಂದ ಮೇ 31ರ ಅವಧಿಯಲ್ಲಿ ರಾಜ್ಯದ ವಿವಿಧೆಡೆ ವಿಶ್ವ ಸುಂದರಿ ಸ್ಪರ್ಧೆಯು ಕೆಲವು ಹಂತಗಳಲ್ಲಿ ನಡೆಯಲಿದೆ. ಹೈದರಾಬಾದ್‌ನಲ್ಲಿ ಸ್ಪರ್ಧೆಯ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳು ನಿಗದಿಯಾಗಿವೆ. ಮೇ 31ರಂದು ವಿಶ್ವ ಸುಂದರಿ ಕಿರೀಟ ಯಾರಿಗೆ ಎನ್ನುವುದು ಗೊತ್ತಾಗಲಿದೆ.
‘ಮಿಸ್ ವರ್ಲ್ಡ್’ ಸ್ಪರ್ಧೆಗೆ ಸುಮಾರು ₹54 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದು ತೆಲಂಗಾಣದ ಪ್ರವಾಸೋದ್ಯಮ ಸಚಿವ ಜುಪಲ್ಲಿ ಕೃಷ್ಣ ರಾವ್ ತಿಳಿಸಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ‘ಮಿಸ್ ವರ್ಲ್ಡ್ ಲಿಮಿಟೆಡ್’ ಪಾಲುದಾರಿಕೆಯಲ್ಲಿ ಸ್ಪರ್ಧೆ ನಡೆಯಲಿದ್ದು, ಇವೆರಡೂ ಸಮಾನವಾಗಿ ಖರ್ಚುವೆಚ್ಚವನ್ನು ಹಂಚಿಕೊಳ್ಳುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.