ಸಾವು (ಪ್ರಾತಿನಿಧಿಕ ಚಿತ್ರ)
ಮುಂಬೈ: ನಾಪತ್ತೆಯಾಗಿದ್ದ ಬೆಂಗಳೂರಿನ ವ್ಯಕ್ತಿತ್ವ ವಿಕಸನ ಭಾಷಣಕಾರ, ಪ್ರೊ. ಷಣ್ಮುಗ ಎಸ್. ಬಾಲಸುಬ್ರಮಣಿಯಂ ಅವರ ಮೃತದೇಹ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಾಥೆರಾನ್ ಗಿರಿಧಾಮದ 1,200 ಅಡಿ ಆಳದ ಕಮರಿಯಲ್ಲಿ ಪತ್ತೆಯಾಗಿದೆ.
ಬೆಂಗಳೂರಿನ ಬೇಲಾಪುರ ನಿವಾಸಿಯಾಗಿದ್ದ ಪ್ರೊ. ಷಣ್ಮುಗ ಅವರು ಅ.13ರಿಂದ 17ರವರೆಗೆ ಆನ್‌ಲೈನ್ ಮೂಲಕ ಗಿರಿಧಾಮದಲ್ಲಿನ ಹೋಟೆಲ್ ಕೊಠಡಿಯನ್ನು ಕಾಯ್ದಿರಿಸಿಕೊಂಡು ತಂಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಅ.15ರಂದು ಹೋಟೆಲ್‌ನಿಂದ ಹೊರಹೋಗಿದ್ದ ಷಣ್ಮುಗ ಅವರು ಮರಳಿರಲಿಲ್ಲ. ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಈ ವಿಷಯ ತಿಳಿಸಿದ್ದರು.
ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬೆಟ್ಟದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಗಿರಿಧಾಮದ ಆಳದ ಕಮರಿಯಲ್ಲಿ ಭಾನುವಾರ ಶವ ಪತ್ತೆಯಾಯಿತು. ಖಾಸಗಿ ರಕ್ಷಣಾ ತಂಡದ 17 ಸದಸ್ಯರು ಮೃತದೇಹವನ್ನು ಅಲ್ಲಿಂದ ತಂದರು.
ಷಣ್ಮುಗ ಅವರ ಹಿರಿಯ ಸಹೋದರ ಶವದ ಗುರುತು ಖಚಿತಪಡಿಸಿದ್ದಾರೆ. ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.