ADVERTISEMENT

ಕಮಾಂಡೊ ಅಧಿಕಾರಿ ಪತ್ತೆಗೆ ಕುಟುಂಬದವರ ಮನವಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 10:12 IST
Last Updated 6 ಏಪ್ರಿಲ್ 2021, 10:12 IST
ಛತ್ತೀಸ್‌ಗಡದ ಬಸ್ತಾರ್ ಪ್ರದೇಶದಿಂದ ಶನಿವಾರ ನಡೆದ ಸಿಆರ್‌ಪಿಎಫ್‌– ಕೋಬ್ರಾ ಕಮಾಂಡೊ ನಡೆಸಿದ ಕಾರ್ಯಾಚರಣೆ ನಂತರ ಕಾಣೆಯಾಗಿರುವ ಸಿಆರ್‌ಪಿಎಫ್‌ – ಕೋಬ್ರಾ ಕಮಾಂಡೊ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರ ಪತ್ನಿ ಮೀನು ಮನ್ಹಾಸ್.
ಛತ್ತೀಸ್‌ಗಡದ ಬಸ್ತಾರ್ ಪ್ರದೇಶದಿಂದ ಶನಿವಾರ ನಡೆದ ಸಿಆರ್‌ಪಿಎಫ್‌– ಕೋಬ್ರಾ ಕಮಾಂಡೊ ನಡೆಸಿದ ಕಾರ್ಯಾಚರಣೆ ನಂತರ ಕಾಣೆಯಾಗಿರುವ ಸಿಆರ್‌ಪಿಎಫ್‌ – ಕೋಬ್ರಾ ಕಮಾಂಡೊ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರ ಪತ್ನಿ ಮೀನು ಮನ್ಹಾಸ್.   

ಶ್ರೀನಗರ: ವಿಂಗ್‌ ಕಮಾಂಡರ್‌ ಅಭಿನಂದನ್ ಅವರನ್ನು ಪಾಕಿಸ್ತಾನದ ಸೆರೆಯಿಂದ ಬಿಡಿಸಿಕೊಂಡ ಬಂದ ರೀತಿಯಲ್ಲೇ ಛತ್ತೀಸ್‌ಗಡದಲ್ಲಿ ನಾಪತ್ತೆಯಾಗಿರುವ ಸಿಆರ್‌ಪಿಎಫ್ ಕೊಬ್ರಾ ಕಮಾಂಡೊ ಅಧಿಕಾರಿ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡಿಸಿಕೊಂಡು ಬರುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ ಮನ್ಹಾಸ್‌ ಅವರ ಕುಟುಂಬದವರು.

ಮೂರು ದಿನಗಳ ಹಿಂದೆ ಛತ್ತೀಸ್‌ಗಡದ ಬಿಜಾಪುರ– ಬಸ್ತಾರ್ ಅರಣ್ಯ ಪ್ರದೇಶದಲ್ಲಿ ಮಾವೊವಾದಿ ಉಗ್ರರು, ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ದಾಳಿಯ ನಂತರ ರಾಕೇಶ್ವರ ಸಿಂಗ್ ಮನ್ಹಾಸ್ ನಾಪತ್ತೆಯಾಗಿದ್ದಾರೆ. ಅವರು ನಾಪತ್ತೆಯಾಗಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಛತ್ತೀಸ್‌ಗಡದ ‘ಐಬಿಸಿ 24‘ – ಸ್ಥಳೀಯ ವಾಹಿನಿ ‘ಮನ್ಹಾಸ್ ಜೀವಂತವಾಗಿದ್ದಾರೆ. ಅವರನ್ನು ನಕ್ಸಲರು ಅಪಹರಿಸಿದ್ದಾರೆ‘ ಎಂದು ಭಾನುವಾರ ಬೆಳಿಗ್ಗೆ ನಮಗೆ ತಿಳಿಸಿದ್ದಾಗಿ‘ ಕುಟುಂಬದ ಸದಸ್ಯರು ಹೇಳಿದ್ದಾರೆ.

ನಕ್ಸಲರ ಸೆರೆಯಿಂದ ತನ್ನ ಪತಿಯನ್ನು ಸರ್ಕಾರ ಬಿಡಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ರಾಕೇಶ್ವರ್ ಸಿಂಗ್ ಪತ್ನಿ ಮೀನು ಮನ್ಹಾಸ್. ‘ನನ್ನ ಪತಿ ಒಂಬತ್ತು ವರ್ಷಗಳಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಶ್ರೀನಗರದಲ್ಲಿ ಸಿಆರ್‌ಪಿಎಫ್‌ಗೆ ನಿಯೋಜನೆಗೊಂಡ ನಂತರ ಹಲವು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು. ಈಗ ಅವರು ನಕ್ಸಲರ ವಶದಲ್ಲಿದ್ದಾರೆ. ನಕ್ಸಲರ ವಶದಿಂದ ಸರ್ಕಾರ ಅವರನ್ನು ಬಿಡಿಸಿ ಕರೆತರಬೇಕು‘ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಫೆಬ್ರವರಿ 2019ರಲ್ಲಿ ಪಾಕಿಸ್ತಾನದ ಸೆರೆಯಿಂದ ಅಭಿನಂದನ್ ಅವರನ್ನು ಬಿಡಿಸಿಕೊಂಡು ಬಂದಂತೆ, ತನ್ನ ಪತಿಯನ್ನು ಬಿಡಿಸಿಕೊಂಡು ಬರುವಂತೆ ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಲ್ಲಿ ಮೀನು ಮನ್ಹಾಸ್ ಮನವಿ ಮಾಡಿದ್ದಾರೆ.

ADVERTISEMENT

ರಾಕೇಶ್ವರ್‌ ಸಿಂಗ್ ಮನ್ಹಾಸ್ ಅವರು ಜಮ್ಮುವಿನ ಬರ್ನಾಯಿ ಪ್ರದೇಶದಲ್ಲಿರುವ ನೆತಾರ್ ಕೊಥೆನ್‌ ಹಳ್ಳಿಯ ನಿವಾಸಿ. 2011ರಲ್ಲಿ ಸಿಆರ್‌ಪಿಎಫ್‌ಗೆ ಸೇರಿದ ಅವರನ್ನು ಮೂರು ತಿಂಗಳ ಹಿಂದೆ ಶ್ರೀನಗರದಿಂದ ಛತ್ತೀಸ್‌ಗಡದ ಕೋಬ್ರಾ 210 ಬೆಟಾಲಿಯನ್‌ಗೆ ವರ್ಗಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.