ADVERTISEMENT

ಬಿಜೆಪಿಯಿಂದ ಉಚ್ಚಾಟನೆಯಾದ ಜಿಂದಾಲ್‌ಗೂ ನಮಗೂ ಸಂಬಂಧವಿಲ್ಲ: ಜಿಂದಾಲ್ ಸಮೂಹ ಸಂಸ್ಥೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2022, 16:19 IST
Last Updated 12 ಜೂನ್ 2022, 16:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಪ್ರವಾದಿ ಮಹಮ್ಮದರ ಅವಹೇಳನಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ನವೀನ್‌ ಕುಮಾರ್‌ ಜಿಂದಾಲ್‌ ಅವರಿಗೂ ಜಿಂದಾಲ್‌ ಸಂಸ್ಥೆಯ ಅಧ್ಯಕ್ಷ ನವೀನ್‌ ಜಿಂದಾಲ್‌ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಜಿಂದಾಲ್‌ ಸಮೂಹ ಸಂಸ್ಥೆ ಭಾನುವಾರ ಸ್ಪಷ್ಟಪಡಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಂದಾಲ್‌ ಸಂಸ್ಥೆ, ‘ನವೀನ್ ಕುಮಾರ್ ಜಿಂದಾಲ್ ಹೆಸರಿನ ವ್ಯಕ್ತಿಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳಿಗೂ, ನಮ್ಮ ಸಂಸ್ಥೆಯ ಅಧ್ಯಕ್ಷರಾದ ನವೀನ್ ಜಿಂದಾಲ್‌ಗೂ ಯಾವುದೇ ರೀತಿಯಲ್ಲೂ ಸಂಬಂಧಿಸಿಲ್ಲ. ವರದಿ ಮಾಡುವಾಗ ನಮ್ಮ ಅಧ್ಯಕ್ಷರ ಚಿತ್ರಗಳನ್ನು ತಪ್ಪಾಗಿ ಬಳಸದಂತೆ ನಾವು ಮಾಧ್ಯಮಗಳಿಗೆ ಮನವಿ ಮಾಡುತ್ತೇವೆ. ಹಾಗೆ ಬಳಸಿದರೆ ಅದು ಗುರುತು ಪತ್ತೆಯಲ್ಲಿನ ಪ್ರಮಾದವಾಗಲಿದೆ’ ಎಂದು ತಿಳಿಸಿದೆ.

ಪ್ರವಾದಿ ಮಹಮ್ಮದ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ದೆಹಲಿ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿತ್ತು.

ADVERTISEMENT

ಪ್ರವಾದಿ ಅವಹೇಳನ ಖಂಡಿಸಿ ಅರಬ್ ರಾಷ್ಟ್ರಗಳಿಂದ ಮತ್ತು ಟ್ವಿಟರ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿ ಈ ಕ್ರಮ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.