ADVERTISEMENT

ಮಿಜೋರಾಂನಲ್ಲಿ ತೈಲ ಕೊರತೆ: ನಿಗದಿತ ಪ್ರಮಾಣದಲ್ಲಿ ತೈಲ ಖರೀದಿಗೆ ಆದೇಶ

ಅಂತರರಾಜ್ಯ ಗಡಿ ವಿವಾದ, ರಾ.ಹೆ 306ರಲ್ಲಿ ತೈಲ ಟ್ಯಾಂಕರ್‌ಗಳ ಸಂಚಾರ ಸ್ಥಗಿತ

ಪಿಟಿಐ
Published 7 ಆಗಸ್ಟ್ 2021, 6:00 IST
Last Updated 7 ಆಗಸ್ಟ್ 2021, 6:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಐಜ್ವಾಲ್‌: ಅಂತರರಾಜ್ಯ ಗಡಿ ವಿವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 306ರಲ್ಲಿ ತೈಲ ಸಾಗಣೆ ಟ್ಯಾಂಕರ್‌ಗಳು ಸೇರಿದಂತೆ, ಎಲ್ಲ ರೀತಿಯ ವಾಹನಗಳ ಸಂಚಾರ ಸ್ಥಗಿತೊಂಡಿದೆ. ಇದರಿಂದ ರಾಜ್ಯದಲ್ಲಿ ತೈಲ ಕೊರತೆ ಎದುರಾಗುವ ಕಾರಣ, ಎಲ್ಲ ಫಿಲ್ಲಿಂಗ್‌ ಸ್ಟೇಷನ್‌ಗಳು ಗ್ರಾಹಕರಿಗೆ ನಿಗದಿತ ಮಿತಿಗೆ ತಕ್ಕಂತೆ ಪೆಟ್ರೊಲ್ ಮತ್ತು ಡೀಸೆಲ್‌ ಪೂರೈಸುವಂತೆ ಮಿಜೋರಾಂ ಸರ್ಕಾರ ಆದೇಶ ಹೊರಡಿಸಿದೆ.

ತೈಲ ಕೊರತೆ ಹಿನ್ನೆಲೆಯಲ್ಲಿ ಶುಕ್ರವಾರ ‌ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಈ ಆದೇಶ ಹೊರಡಿಸಿದೆ.

‘ಫಿಲ್ಲಿಂಗ್‌ ಸ್ಟೇಷನ್‌ಗಳು ಅನುಮತಿ ನೀಡಿದ ಪ್ರಮಾಣದಲ್ಲೇ ಪೆಟ್ರೊಲ್‌–ಡೀಸೆಲ್‌ ಪೂರೈಸಬೇಕು. ಫಿಲ್ಲಿಂಗ್ ಸ್ಟೇಷನ್‌ಗಳಿಗೆ ಹೋಗುವ ವಾಹನಗಳಿಗೆ ಮಾತ್ರ ತೈಲವನ್ನು ನೀಡಬೇಕು‘ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಆರು, ಎಂಟು ಮತ್ತು ಹನ್ನೆರಡು ಚಕ್ರ ವಾಹನಗಳಂತಹ ಭಾರಿ ವಾಹನಗಳಿಗೆ, ಒಂದು ಬಾರಿಗೆ ಖರೀದಿಸುವ ತೈಲ ಪ್ರಮಾಣವನ್ನು 50 ಲೀಟರ್‌ಗಳಿಗೆ ಮಿತಿಗೊಳಿಸಲಾಗಿದೆ. ಮಧ್ಯಮ ಮೋಟಾರು ವಾಹನಗಳಾದ ಪಿಕ್-ಅಪ್ ಟ್ರಕ್‌ಗಳಿಗೆ 20 ಲೀಟರ್‌ಗೆ ಮಿತಿಗೊಳಿಸಲಾಗಿದೆ. ಆದರೆ, ಅಕ್ಕಿ ಮೂಟೆ, ಅಡುಗೆ ಎಣ್ಣೆ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುವ ವಾಹನಗಳಿಗೆ ತೈಲ ಖರೀದಿ ಮಿತಿಯನ್ನು ವಿಧಿಸಿಲ್ಲ. ಈ ವಾಹನಗಳಿಗೆ ಅಗತ್ಯವಿರುವಷ್ಟು ತೈಲ ಪೂರೈಸಲು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.