
ಚೆನ್ನೈ: ‘ರಾಜ್ಯಪಾಲರ ಭಾಷಣದ ಮೂಲಕ ಮೊದಲ ಅಧಿವೇಶನ ನಡೆಸುವ ಸಂಪ್ರದಾಯವನ್ನೇ ಕೈ ಬಿಡಬೇಕು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸದನದಲ್ಲಿ ಭಾಷಣ ಮಾಡದೇ, ಹೊರನಡೆದ ಬೆನ್ನಲ್ಲೇ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.
‘ಮೊದಲು ತಮಿಳುನಾಡು, ನಂತರ ಕೇರಳ, ಈಗ ಕರ್ನಾಟಕ. ಮಾದರಿಯೂ ಸ್ಪಷ್ಟ ಹಾಗೂ ಉದ್ದೇಶಪೂರ್ವಕವಾಗಿದೆ. ಸರ್ಕಾರವು ಸಿದ್ಧಪಡಿಸಿಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಲು ನಿರಾಕರಿಸುವ ಪಕ್ಷದ ಏಜೆಂಟರಂತೆ ವರ್ತಿಸಿದ್ದಾರೆ. ಆ ಮೂಲಕ ಜನರಿಂದ ಆಯ್ಕೆಯಾದ ಸರ್ಕಾರವನ್ನೇ ದುರ್ಬಲಗೊಳಿಸುವ ಯತ್ನಕ್ಕೆ ಕೈ ಹಾಕಿದ್ದಾರೆ’ ಎಂದು ತಿಳಿಸಿದ್ದಾರೆ.
ಮಂಗಳವಾರ ತಮಿಳುನಾಡು ಅಧಿವೇಶನದ ವೇಳೆ ರಾಜ್ಯಪಾಲ ಆರ್.ಎನ್ ರವಿ ಅವರು ಭಾಷಣ ಮಾಡದೇ ಸದನ ಬಹಿಷ್ಕರಿಸಿ ಹೊರನಡೆದಿದ್ದರು. ಸತತ ಮೂರನೇ ಬಾರಿ ರಾಜ್ಯಪಾಲರು ಈ ರೀತಿ ನಡೆದುಕೊಂಡಿದ್ದು, ಇಂತಹ ಸಂಪ್ರದಾಯನ್ನೇ ಕೈ ಬಿಡಬೇಕು ಎಂದು ಸ್ಟಾಲಿನ್ ಆಗ್ರಹಿಸಿದ್ದಾರೆ.
‘ಡಿಎಂಕೆ ಪಕ್ಷವು ದೇಶದಾದ್ಯಂತ ಸಮಾನ ಮನಸ್ಕ ವಿರೋಧ ಪಕ್ಷಗಳ ಜೊತೆಗೆ ಈ ವಿಷಯದ ಕುರಿತು ಚರ್ಚೆ ನಡೆಸಲಿದ್ದು, ಅಪ್ರಸ್ತುತವಾದ ಪದ್ಧತಿಯನ್ನು ರದ್ದುಗೊಳಿಸಲು ಮುಂದಿನ ಅಧಿವೇಶನದಲ್ಲಿಯೇ ತಿದ್ದುಪಡಿ ತರಲು ಒತ್ತಾಯಿಸಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.