ADVERTISEMENT

ವಿಶೇಷ ವರದಿ: ಕರುಣಾನಿಧಿ ನಿಧನದ ಬಳಿಕ ಬದಲಾಗಲಿದೆಯೇ ತಮಿಳುನಾಡು ರಾಜಕೀಯ ಚಿತ್ರಣ?

ಇ.ಟಿ.ಬಿ ಶಿವಪ್ರಿಯನ್‌
Published 10 ಆಗಸ್ಟ್ 2018, 19:30 IST
Last Updated 10 ಆಗಸ್ಟ್ 2018, 19:30 IST
ಕರುಣಾನಿಧಿ
ಕರುಣಾನಿಧಿ   

ಚೆನ್ನೈ: ದ್ರಾವಿಡ ಚಳವಳಿಯ ಕೊನೆಯ ಹೆಮ್ಮರ ಮುತ್ತುವೇಲ್‌ ಕರುಣಾನಿಧಿ ಈ ಲೋಕಕ್ಕೆ ವಿದಾಯ ಹೇಳಿ ತಮ್ಮ ಗುರು ಸಿ.ಎನ್‌. ಅಣ್ಣಾದೊರೈ ಸಮೀಪ ಐತಿಹಾಸಿಕ ಮರೀನಾ ಕಿನಾರೆಯಲ್ಲಿ ಚಿರನಿದ್ರೆಗೆ ಜಾರಿದ್ದಾರೆ.

ಮುಂದಿನ ತಲೆಮಾರಿನಲ್ಲಿಯೂ ದ್ರಾವಿಡ ಸಿದ್ಧಾಂತ ಪ್ರಸ್ತುತ ಎನಿಸುವಂತೆ ನೋಡಿಕೊಳ್ಳುವ ಭಾರಿ ಜವಾಬ್ದಾರಿ ಈಗ ಈ ಚಳವಳಿಯಲ್ಲಿ ನಂಬಿಕೆ ಇರಿಸಿಕೊಂಡವರ ಮೇಲೆ ಇದೆ. ಕರುಣಾನಿಧಿ ಅಧ್ಯಕ್ಷರಾಗಿದ್ದ ಡಿಎಂಕೆ ಮುಖಂಡರಷ್ಟೇ ಇದಕ್ಕೆ ಹೊಣೆಗಾರರಲ್ಲ ಎಂದು ದ್ರಾವಿಡ ಚಳವಳಿಯ ಪ್ರಮುಖರು ಮತ್ತು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಹೋಳಾಗಿದೆ. ತಮಿಳುನಾಡಿನಲ್ಲಿ ಅಸ್ತಿತ್ವವೇ ಇಲ್ಲದ ಬಿಜೆಪಿ, ಎಐಎಡಿಎಂಕೆ ಸರ್ಕಾರವನ್ನು ನಿಯಂತ್ರಿಸುವ ಮೂಲಕ ಹಿಂಬಾಗಿಲ ಪ್ರವೇಶಕ್ಕೆ ಪ್ರಯತ್ನಿಸುತ್ತಿದೆ. ಅದೇ ಹೊತ್ತಿನಲ್ಲಿ ಕರುಣಾನಿಧಿ ಅವರೂ ಮೃತಪಟ್ಟಿರುವುದು ದ್ರಾವಿಡ ಚಳವಳಿಗೆ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

‘ಕರುಣಾನಿಧಿ ಅವರು ದ್ರಾವಿಡ ಚಳವಳಿಯ ಬಹುದೊಡ್ಡ ನಾಯಕ. ಅವರ ಸ್ಥಾನವನ್ನು ತುಂಬುವುದು ಯಾರಿಂದಲೂ ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಈಗಾಗಲೇ ಬೇರು ಬಿಡಲಾರಂಭಿಸಿರುವ ತಮಿಳು ಸಮಾಜದ ವಿರೋಧಿಗಳನ್ನು ತಡೆಯಲು ಪ್ರಯತ್ನ ನಡೆಯಲೇಬೇಕು’ ಎಂದು ದ್ರಾವಿಡ ವಿಚಾರವಾದಿ ಸೂಬಾ ವೀರಪಾಂಡ್ಯನ್‌ ಹೇಳುತ್ತಾರೆ.

‘ಅಣ್ಣಾದೊರೈ ಆರಂಭಿಸಿದ ಚಳವಳಿಯನ್ನು ಕರುಣಾನಿಧಿ ಮುಂದುವರಿಸಿದರು. ಅವರು ನಿಲ್ಲಿಸಿದಲ್ಲಿಂದ ದ್ರಾವಿಡ ಪರಂಪರೆಯನ್ನು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ಮುಂದುವರಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈಗ ದ್ರಾವಿಡ ಚಳವಳಿಯು ಬಿಜೆಪಿಯ ಪ್ರಾಬಲ್ಯವನ್ನು ಎದುರಿಸಲೇಬೇಕು. ಬಿಜೆಪಿ ಪ್ರಬಲವಾಗುತ್ತಿದ್ದರೂ ದ್ರಾವಿಡ ಚಳವಳಿಯ ಮಹತ್ವ ಕಮ್ಮಿಯಾಗದು ಎಂದು ಮದ್ರಾಸ್‌ ವಿಶ್ವವಿದ್ಯಾಲಯದ ರಾಜಕೀಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥ ಮಣಿವಣ್ಣನ್‌ ಹೇಳಿದ್ದಾರೆ.

‘ತಮಿಳುನಾಡಿನಲ್ಲಿ ಬಿಜೆಪಿ ನೆಲೆಯೂರುತ್ತಿಲ್ಲ. ಆದರೆ, ತಮಿಳುನಾಡಿನ ರಾಜಕೀಯ ಚಿಂತನೆಯನ್ನು ಬದಲು ಮಾಡಲು ಯತ್ನಿಸುತ್ತಿದೆ. ಕರ್ನಾಟಕ, ಕೇರಳ ಮತ್ತು ಆಂಧ್ರ ಪ್ರದೇಶದಲ್ಲಿ ಬಿಜೆಪಿ ಕೋಮುವಾದಿ ಪಕ್ಷ ಎಂದು ಗುರುತಿಸಿಕೊಂಡಿದೆ. ಆದರೆ, ತಮಿಳುನಾಡಿನಲ್ಲಿ ಜನಾಂಗೀಯವಾದಿ ಪಕ್ಷ ಎಂಬ ಹಣೆಪಟ್ಟಿ ಪಡೆದುಕೊಂಡಿದೆ. ಇಲ್ಲಿನ ರಾಜಕೀಯದಲ್ಲಿ ಪ್ರಭಾವ ಬೀರಲು ಯತ್ನಿಸುತ್ತಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ತಮಿಳುನಾಡಿನಲ್ಲಿ ರಾಜಕೀಯ ನಿರ್ವಾತ ಇಲ್ಲ ಎಂದು ಹೇಳುವವರು ಯಾರು? ಇಬ್ಬರು ಹಿರಿಯ ನಾಯಕರು ನಿಧನರಾಗಿದ್ದಾರೆ. ಈ ರಾಜ್ಯದಲ್ಲಿ ಬೇರೂರಲು ಬಹಳ ಕಾಲದಿಂದ ನಾವು ಯತ್ನಿಸುತ್ತಿದ್ದೇವೆ. ನೆಲೆ ವಿಸ್ತರಿಸಿಕೊಳ್ಳಲು ಪ್ರತಿ ರಾಜಕೀಯ ಪಕ್ಷಕ್ಕೂ ಹಕ್ಕು ಇದೆ’ ಎಂದು ಬಿಜೆಪಿ ಮುಖಂಡ ಸಿ.ಪಿ. ರಾಧಾಕೃಷ್ಣನ್‌ ಹೇಳಿದ್ದಾರೆ.

ಬಿಜೆಪಿಯ ರಾಜಕಾರಣಕ್ಕೆ ದ್ರಾವಿಡ ಪರಂಪರೆಯ ಜತೆಗೆ ಯಾವ ಸಂಬಂಧವೂ ಇಲ್ಲ ಎಂದು ಅಣ್ಣಾದೊರೈ ಮತ್ತು ಎಂ.ಜಿ. ರಾಮಚಂದ್ರನ್‌ ಅವರ ಜೀವನಚರಿತ್ರೆ ಬರೆದಿರುವ ಆರ್‌. ಕಣ್ಣನ್‌ ಹೇಳುತ್ತಾರೆ.
***
14ರಂದು ಡಿಎಂಕೆ ಕಾರ್ಯಕಾರಿಣಿ
ಚೆನ್ನೈ(ಪಿಟಿಐ): ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಲು ಆಗಸ್ಟ್‌ 14ರಂದು ಪಕ್ಷದ ಕಾರ್ಯಕಾರಿಣಿ ನಡೆಯಲಿದೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವಂತೆ ಸಮಿತಿಯ ಎಲ್ಲಾ ಸದಸ್ಯರಿಗೆ ಸೂಚಿಸಲಾಗಿದೆ. ಸಭೆಯಲ್ಲಿ ಸಂತಾಪ ನಿರ್ಣಯ ಅಂಗೀಕರಿಸಲಾಗುವುದು. ಅನಂತರ ಸರ್ವ ಸದಸ್ಯರ ಸಭೆಯ ದಿನಾಂಕ ಘೋಷಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್‌ ಅವರನ್ನು ಅಧ್ಯಕ್ಷರಾಗಿ ಘೋಷಿಸುವ ಕುರಿತು ಸಿದ್ಧತೆ ನಡೆದಿದ್ದು, ಸರ್ವ ಸದಸ್ಯರ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕಾರವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.