ಮುಂಬೈ: ಮರಾಠಿ ಕಲಿಯಲು ನಿರಾಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಉದ್ಯಮಿ ಸುಶೀಲ್ ಕೇಡಿಯಾ ಅವರ ಕಚೇರಿಯ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಕಚೇರಿ ಆವರಣದಲ್ಲಿ ದಾಂಧಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಉದ್ರಿಕ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಭಾಷಾ ವಿಷಯಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಕೇಡಿಯಾ, ‘30 ವರ್ಷದಿಂದ ಮುಂಬೈನಲ್ಲಿ ವಾಸಿಸುತ್ತಿದ್ದರು ನನಗೆ ಮರಾಠಿ ಸರಿಯಾಗಿ ಬರುತ್ತಿಲ್ಲ. ಭಾಷೆ ಉಳಿಸುವ ಸೋಗು ಹಾಕಿಕೊಂಡಿರುವ ನಿಮ್ಮಂತವರನ್ನು ನೋಡಿದ ಮೇಲಂತೂ ಮರಾಠಿ ಕಲಿಯಬಾರದು ಎಂದು ನಾನು ಪ್ರತಿಜ್ಞೆ ಮಾಡಿದ್ದೇನೆ. ಏನು ಮಾಡೋಣ ಹೇಳು?’ ಎಂದು ರಾಜ್ ಠಾಕ್ರೆ ಅವರನ್ನು ಟ್ಯಾಗ್ ಮಾಡಿದ್ದರು.
ಇದರಿಂದ ಕೆರಳಿದ ಎಂಎನ್‌ಎಸ್ ಕಾರ್ಯಕರ್ತರು, ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಾಲ್ಕು ದಿನಗಳ ಹಿಂದೆ ಮರಾಠಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಠಾಣೆ ನಗರದ ಅಂಗಡಿ ಮಾಲೀಕರೊಬ್ಬರ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಮಾಲೀಕನ ಕೆನ್ನೆಗೆ ನಾಲ್ಕೈದು ಬಾರಿ ಹೊಡೆದು ಹಲ್ಲೆ ನಡೆಸಿದ ಅವರು ಬೆದರಿಕೆಯನ್ನೂ ಹಾಕಿದ್ದರು. ಅಲ್ಲದೇ ಅದನ್ನು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.