ADVERTISEMENT

ಮೋದಿ 'ಮತ ಕಳ್ಳ' ಎಂದು ಆರೋಪಿಸಿದ್ದಕ್ಕೆ FIR: ಸತ್ಯ ಹೇಳಲು ಹೆದರಲ್ಲ ಎಂದ ತೇಜಸ್ವಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 14:08 IST
Last Updated 23 ಆಗಸ್ಟ್ 2025, 14:08 IST
<div class="paragraphs"><p>ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್‌</p></div>

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್‌

   

ಕೃಪೆ: ಪಿಟಿಐ

ಶಹಜಹಾನ್‌ಪುರ: ಸಾಮಾಜಿಕ ಮಾಧ್ಯಮದ ಪೋಸ್ಟ್‌ವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಮತ ಕಳ್ಳ’ ಎಂದು ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ವಿರುದ್ಧ ಉತ್ತರ ಪ್ರದೇಶದ ಶಹಜಹಾನ್‌ಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಶಿಲ್ಪಿ ಗುಪ್ತ ಅವರು ನೀಡಿದ್ದ ದೂರು ಆಧರಿಸಿ ಶುಕ್ರವಾರ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಎಸ್‌ಪಿ ರಾಜೇಶ್‌ ದ್ವಿವೇದಿ ತಿಳಿಸಿದ್ದಾರೆ.

‘ಪ್ರಧಾನಿ ವಿರುದ್ಧ ಅನುಚಿತ ಪದ ಬಳಸಲಾಗಿದೆ. ಆರ್‌ಜೆಡಿಯ ಅಧಿಕೃತ ಖಾತೆಯಿಂದ ‘ಇಂದು ಮತಗಳ್ಳ ಗಯಾಗೆ ಬರುತ್ತಿದ್ದಾನೆ. ಬಿಹಾರಿಗಳ ಎದುರು ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾನೆ’ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಲಾಗಿತ್ತು. ಇದು ದೇಶದ ಜನರು ಮತ್ತು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಯಾದವ್‌ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸದರ್ ಬಜಾರ್‌ ಠಾಣೆಗೆ ಗುಪ್ತ ದೂರು ನೀಡಿದ್ದರು.

ತೇಜಸ್ವಿ ಯಾದವ್‌ ವಿರುದ್ಧ ಬಿಎನ್‌ಎಸ್‌ ಕಾಯ್ದೆಯ ಸೆಕ್ಷನ್‌ 353(2) (ವದಂತಿ ಹಬ್ಬಿಸುವುದು) ಮತ್ತು 197(1)ರ (ಚಿತ್ರ ಬಳಸಿ ವೃಥಾ ಆರೋಪ) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ಮತ್ತೊಂದೆಡೆ, ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯಲ್ಲೂ ಸ್ಥಳೀಯ ಶಾಸಕ ಮಿಲಿಂದ್‌ ನಾರೋಟೆ ಅವರ ದೂರಿನ ಆಧಾರದ ಮೇಲೆ ತೇಜಸ್ವಿ ಯಾದವ್ ಅವರ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ.

ಹೆದರಿಲ್ಲ; ಸತ್ಯ ಹೇಳುವುದು ನಿಲ್ಲಿಸಲ್ಲ: ತೇಜಸ್ವಿ ಯಾದವ್‌

ಕಟಿಹಾರ್: ‘ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಎಫ್‌ಐಆರ್‌ ದಾಖಲಿಸಿದ ಮಾತ್ರಕ್ಕೆ ನಾನು ಹೆದರುವುದಿಲ್ಲ. ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ’ ಎಂದು ತೇಜಸ್ವಿಯಾದವ್‌ ಅವರು ಪ್ರತಿಕ್ರಿಯಿಸಿದ್ದಾರೆ.

‘ಎಫ್‌ಐಆರ್‌ಗೆ ಯಾರು ಹೆದರಿದ್ದಾರೆ? ‘ಜುಮ್ಲಾ’ ಎನ್ನುವುದು ಆಕ್ಷೇಪಾರ್ಹ ಪದವೇ? ಸತ್ಯ ಹೇಳುವುದನ್ನು ಮುಂದುವರಿಸುವೆ. ಅವರು ಎಷ್ಟು ಪ್ರಕರಣ ಬೇಕಿದ್ದರೂ ಹಾಕಿಕೊಳ್ಳಲಿ’ ಎಂದು ಯಾದವ್‌ ಹೇಳಿದ್ದಾರೆ.

ಕಟಿಹಾರ್ ಜಿಲ್ಲೆಯ ಮೀನು ಮಾರುಕಟ್ಟೆ ಮತ್ತು ಮಖಾನಾ (ಕಮಲ ಬೀಜ) ಕೃಷಿ ಪ್ರದೇಶದಲ್ಲಿ ‘ಮತದಾರನ ಅಧಿಕಾರ ಯಾತ್ರೆ’ಯಲ್ಲಿ ಭಾಗಿಯಾಗಿದ್ದ ಯಾದವ್‌ ಎಫ್‌ಐಆರ್‌ ದಾಖಲಾಗಿರುವ ಬಗ್ಗೆ ಈ ರೀತಿ  ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.