ADVERTISEMENT

ರಫೇಲ್ ದಾಖಲೆ ಕಳವು: ಮುಖ್ಯ ನ್ಯಾಯಮೂರ್ತಿ ಹೇಳಿದ್ದೇನು?

ಮರುಪರಿಶೀಲನಾ ಅರ್ಜಿ ಜತೆ ದಾಖಲೆಯೂ ಪರಿಶೀಲನೆಗೆ ಬರುತ್ತಾ? * ಮುಂದಿನ ವಿಚಾರಣೆ 14ಕ್ಕೆ

ಏಜೆನ್ಸೀಸ್
Published 6 ಮಾರ್ಚ್ 2019, 12:49 IST
Last Updated 6 ಮಾರ್ಚ್ 2019, 12:49 IST
   

ನವದೆಹಲಿ:ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್‌ 14ಕ್ಕೆ ನಿಗದಿಪಡಿಸಿದೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ADVERTISEMENT

ಈ ವೇಳೆ ವಾದ ಮಂಡಿಸಿದ ಭೂಷಣ್, ಹಿಂದಿನ ತೀರ್ಪಿನ ವೇಳೆ ಸುಪ್ರೀಂ ಕೋರ್ಟ್‌ ತಪ್ಪಾದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡಿತ್ತು. ಆದರೆ, ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಹೊಸ ದಾಖಲೆಯನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರದ ಪರ ಪ್ರತಿವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ‘ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ದಾಖಲೆಗಳನ್ನು ರಕ್ಷಣಾ ಇಲಾಖೆಯಿಂದ ಹಾಲಿ ಅಥವಾ ಮಾಜಿ ಉದ್ಯೋಗಿಗಳು ಕಳವು ಮಾಡಿದ್ದಾರೆ. ಈ ಕುರಿತು‘ಅಧಿಕೃತ ರಹಸ್ಯ ಕಾಯ್ದೆ’ ಅನ್ವಯ ಸರ್ಕಾರ ತನಿಖೆ ನಡೆಸುತ್ತಿದೆ. ಈ ದಾಖಲೆಗಳನ್ನು ಎರಡು ಮಾಧ್ಯಮಗಳು ಪ್ರಕಟಿಸಿರುವುದು‘ಅಧಿಕೃತ ರಹಸ್ಯ ಕಾಯ್ದೆ’ಯ ಉಲ್ಲಂಘನೆ’ ಎಂದು ಹೇಳಿದರು.

‘ರಹಸ್ಯ ದಾಖಲೆಗಳನ್ನು ಮರುಪರಿಶೀಲನಾ ಅರ್ಜಿಯ ಜತೆ ಸೇರಿಸಬಾರದು. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮರುಪರಿಶೀಲನಾ ಮತ್ತು ಸುಳ್ಳು ಅರ್ಜಿಗಳನ್ನು ವಜಾ ಮಾಡಬೇಕು’ ಎಂದೂ ಅಟಾರ್ನಿ ಜನರ್ ಮನವಿ ಮಾಡಿದರು.

ನ್ಯಾಯಮೂರ್ತಿ ಹೇಳಿದ್ದೇನು?

ದಾಖಲೆ ಪರಿಗಣಿಸುವ ವಿಚಾರಕ್ಕೆ ಸಂಬಂಧಿಸಿ ಉದಾಹರಣೆ ನೀಡಿದರಂಜನ್ ಗೊಗೊಯ್, ‘ಆರೋಪಿಯು ತನ್ನ ನಿರಪರಾಧಿತ್ವಸಾಬೀತುಪಡಿಸಲು ದಾಖಲೆ ಕಳವು ಮಾಡಿದ್ದೇ ಆದಲ್ಲಿ ಅದನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಳ್ಳಬೇಕು’ ಎಂದರು.

‘ಒಬ್ಬ ಆರೋಪಿಗೆ ತನ್ನ ನಿರಪರಾಧಿತ್ವಸಾಬೀತುಪಡಿಸುವುದು ಕಷ್ಟವಾಗುತ್ತದೆ. ಆತ ದಾಖಲೆಯನ್ನು ಕದ್ದು ಜಡ್ಜ್‌ಗೆ ತೋರಿಸುತ್ತಾನೆ. ಆ ದಾಖಲೆಯು ಆತ ನಿರಪರಾಧಿಎಂಬುದನ್ನು ತೋರಿಸುತ್ತದೆ. ಆಗ ಜಡ್ಜ್‌ ಆ ದಾಖಲೆಯನ್ನು ಸ್ವೀಕರಿಸದೇ ಇರಬೇಕೇ’ ಎಂದುಗೊಗೊಯ್ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್, ‘ವಿಷಯ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದ್ದಾಗಿರುವುದರಿಂದ ನ್ಯಾಯಾಲಯ ಅದನ್ನು ಪರಿಗಣಿಸಬಾರದು’ ಎಂದು ಹೇಳಿದರು. ದಿ ಹಿಂದೂ ಮತ್ತು ಎಎನ್ಐಯಲ್ಲಿ ಪ್ರಕಟವಾದ ದಾಖಲೆಗಳು ಕಳವಾದವುಗಳಾಗಿದ್ದು ಆ ಬಗ್ಗೆ ಸರ್ಕಾರ ಗುರುವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ ಎಂದೂ ಅವರು ಹೇಳಿದರು.

ಸುಳಿವು ಬಿಟ್ಟುಕೊಡದ ಸಿಜೆಐ

‘ಅಟಾರ್ನಿ ಜನರಲ್ ವಾದವನ್ನು ನಾವು ಒಪ್ಪಿದಲ್ಲಿ ಈ ದಾಖಲೆಗಳನ್ನು ಬಿಟ್ಟು ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಲಿದ್ದೇವೆ. ಒಂದು ವೇಳೆಅಟಾರ್ನಿ ಜನರಲ್ ಮನವಿಯನ್ನು ತಿರಸ್ಕರಿಸಿದಲ್ಲಿ, ಈ ದಾಖಲೆಗಳು ಮರುಪರಿಶೀಲನಾ ಅರ್ಜಿ ಜೊತೆ ವಿಚಾರಣೆಗೆ ಹೇಗೆ ಸೂಕ್ತವಾಗುತ್ತವೆ ಎಂಬ ಬಗ್ಗೆ ಪರಿಶೀಲಿಸಲಿದ್ದೇವೆ’ ಎಂದು ಅರ್ಜಿದಾರ ಪ್ರಶಾಂತ್‌ ಭೂಷಣ್‌ಗೆ ಗೊಗೊಯ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.