ಮೆಹಬೂಬಾ ಮುಫ್ತಿ
ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಕದನ ವಿರಾಮದ ಮೂಲಕ ಶಾಂತಿಯುತವಾಗಿ ಶಮನಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಡೆಯನ್ನು ರಾಜಕೀಯವಾಗಿ ಗುರಿಯಾಗಿಸಬಾರದು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ( ಪಿಡಿಪಿ ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮಂಗಳವಾರ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಫ್ತಿ, ಈ ವಿಷಯದಲ್ಲಿ ಎಲ್ಲಾ ವಿರೋಧ ಪಕ್ಷಗಳು ರಾಜಕೀಯ ಟೀಕೆಗಳನ್ನು ನಿಲ್ಲಿಸಬೇಕು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ ಇಡೀ ದೇಶವೇ ಒಂದಾಗಿದೆ. ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ಹಾಗೂ ಶಾಂತಿ ಅನುಸರಿಸುವ ನಿಟ್ಟಿನಲ್ಲಿ ಒಮ್ಮತ ಮೂಡುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರಂತಹ ನಾಯಕರು, ಭದ್ರತೆ ಅಥವಾ ಸಾರ್ವಭೌಮತ್ವ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆಯೇ, ಉದ್ವಿಗ್ನತೆಯ ಸಮಯದಲ್ಲೂ ಗಡಿಯಾಚೆಗಿನ ಮಾತುಕತೆ ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಮುಫ್ತಿ ಹೇಳಿದ್ದಾರೆ.
ಕದನ ವಿರಾಮವನ್ನು ಟೀಕಿಸುವವರು ತಮ್ಮ ಕುಟುಂಬಗಳ ಜತೆ ಗಡಿಯಲ್ಲಿ ಬಂದು ನೆಲೆಸಿ, ಆಗ ನಿಮಗೆ ಸಾವು–ನೋವಿನ ನೈಜ ಚಿತ್ರಣ ಅರ್ಥವಾಗುತ್ತದೆ ಎಂದು ಮುಫ್ತಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.
ಗುರುವಾರ ತಡರಾತ್ರಿ ಭಾರತ ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್‌ಗೆ ಮತ್ತೊಮ್ಮೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್. ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.