ADVERTISEMENT

ಭ್ರಷ್ಟಾಚಾರಿಗಳು ಜೈಲಿಗೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ನ್ಯಾಷನಲ್ ಹೆರಾಲ್ಡ್ ಪ್ರಕರಣ

ಪಿಟಿಐ
Published 17 ಏಪ್ರಿಲ್ 2025, 15:43 IST
Last Updated 17 ಏಪ್ರಿಲ್ 2025, 15:43 IST
<div class="paragraphs"><p>BJP</p></div>

BJP

   

ನವದೆಹಲಿ: ಭ್ರಷ್ಟಾಚಾರ ವಿಷಯದಲ್ಲಿ ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರಿಸಿದ್ದು, ‘ಭ್ರಷ್ಟಾಚಾರದಲ್ಲಿ ತೊಡಗಿರುವ ಮತ್ತು ರೈತರ ಭೂಮಿಯನ್ನು ಕಬಳಿಸಿದವರನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಜೈಲಿಗೆ ದಬ್ಬಲಿದೆ’ ಎಂದು ಗುರುವಾರ ಪ್ರತಿಪಾದಿಸಿದೆ.

‘ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಮತ್ತು ಭೂಮಿ ಕಳೆದುಕೊಂಡಿರುವ ರೈತರಿಗೆ ಅದನ್ನು ಹಿಂದಿರುಗಿಸುವುದು ಮೋದಿ ಸರ್ಕಾರದ ಸಂಕಲ್ಪವಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ADVERTISEMENT

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣದ ಅಕ್ರಮ ವರ್ಗಾವಣೆಯ ಆರೋಪ ಹೊರಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಮಂಗಳವಾರ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಹರಿಯಾಣದ ಭೂ ವ್ಯವಹಾರದ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ರಾಬರ್ಟ್‌ ವಾದ್ರಾ ಅವರು ಸತತ ಮೂರನೇ ದಿನವಾದ ಗುರುವಾರ ಕೂಡ ವಿಚಾರಣೆಗಾಗಿ ಇ.ಡಿ ಮುಂದೆ ಹಾಜರಾದರು.

‘ತಾನು ಈ ದೇಶದ ಕಾನೂನಿಗಿಂತ ಮೇಲೆ ಇದ್ದೇನೆ ಎಂದು ವಾದ್ರಾ ಭಾವಿಸುತ್ತಾರೆ. ಕೇಂದ್ರದಲ್ಲಿರುವುದು ಮೋದಿ ನೇತೃತ್ವದ ಪ್ರಾಮಾಣಿಕ ಸರ್ಕಾರ ಎಂಬುದು ಅವರಿಗೆ ಮನವರಿಕೆಯಾಗಿಲ್ಲ. ಬಿಜೆಪಿ ಸರ್ಕಾರದಡಿ ತನಿಖಾ ಸಂಸ್ಥೆಗಳು ಪಂಜರದ ಗಿಳಿಗಳಲ್ಲ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಗೆ ಇರುವವರನ್ನು ಜೈಲಿಗೆ ಕಳುಹಿಸುವ ಕೆಲಸವನ್ನು ತನಿಖಾ ಸಂಸ್ಥೆಗಳು ಮಾಡಲಿವೆ’ ಎಂದರು.

‘ರಾಬರ್ಟ್ ವಾದ್ರಾ ಭೂಮಿಯನ್ನು ಕಬಳಿಸಿದರೆ, ರಾಹುಲ್ ಗಾಂಧಿ ಹೆಸರು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ, ಸೋನಿಯಾ ಗಾಂಧಿ ಹೆಸರು ವಿವಿಐಪಿ ಹೆಲಿಕಾಪ್ಟರ್‌ ಹಗರಣದಲ್ಲಿ ಮತ್ತು ರಾಜೀವ್ ಗಾಂಧಿ ಹೆಸರು ಬೊಫೋರ್ಸ್‌ ಹಗರಣದಲ್ಲಿ ಕೇಳಿಬಂದಿವೆ. ಗಾಂಧಿ ಕುಟುಂಬವು ಭ್ರಷ್ಟ ಮತ್ತು ಕಳ್ಳ’ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.