ADVERTISEMENT

ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರಲಿ: ಉದ್ಧವ್‌ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:33 IST
Last Updated 16 ಜೂನ್ 2019, 20:33 IST
ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ, ಮುಖಂಡ ಸಂಜಯ್‌ ರಾವತ್‌ ಹಾಗೂ ನೂತನವಾಗಿ ಆಯ್ಕೆಯಾದ ಸಂಸದರು ಅಯೋಧ್ಯೆಯ ರಾಮ ಲಲ್ಲಾ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದರು –ಪಿಟಿಐ ಚಿತ್ರ
ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ, ಮುಖಂಡ ಸಂಜಯ್‌ ರಾವತ್‌ ಹಾಗೂ ನೂತನವಾಗಿ ಆಯ್ಕೆಯಾದ ಸಂಸದರು ಅಯೋಧ್ಯೆಯ ರಾಮ ಲಲ್ಲಾ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದರು –ಪಿಟಿಐ ಚಿತ್ರ   

ಅಯೋಧ್ಯೆ: ‘ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಗ್ರೀವಾಜ್ಞೆ ತರುವ ಧೈರ್ಯವಿದೆ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಭಾನುವಾರ ಹೇಳಿದ್ದಾರೆ.

ಚುನಾವಣೆಗೂ ಮುನ್ನ ಬೇಡಿಕೊಂಡಿದ್ದ ಹರಕೆ ತೀರಿಸಲು ಠಾಕ್ರೆ ಅವರು ತಮ್ಮ ಪುತ್ರ ಆದಿತ್ಯ ಹಾಗೂ ಶಿವಸೇನೆಯ 18 ಮಂದಿ ಸಂಸದರೊಟ್ಟಿಗೆ ಅಯೋಧ್ಯೆಗೆ ಬಂದು ರಾಮ ಲಲ್ಲಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಮಂದಿರ ಜಾಗದ ವಿವಾದದ ವಿಚಾರಣೆ ಹಲವು ವರ್ಷಗಳಿಂದ ಕೋರ್ಟ್‌ನಲ್ಲಿ ನಡೆಯುತ್ತಿದೆ. ಆದರೆ, ಸರ್ಕಾರ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು. ಇದು ಕೇವಲ ಶಿವಸೇನಾಕ್ಕೆ ಸೀಮಿತವಾಗಿಲ್ಲ, ವಿಶ್ವದ ಎಲ್ಲ ಹಿಂದೂಗಳ ಅಪೇಕ್ಷೆಯಾಗಿದೆ. ಆದ್ದರಿಂದ ಬೇಗನೆ ಮಂದಿರ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಬೇಕು’ ಎಂದ ಅವರು, ‘ಕಾನೂನು ರೂಪಿಸಿ, ಮಂದಿರ ಕಟ್ಟಿ’ ಎಂಬ ಘೋಷಣೆ ಕೂಗಿದರು.

ADVERTISEMENT

ಬಿಜೆಪಿ ಮೇಲೆ ಒತ್ತಡ ಹೇರಲು ಅಯೋಧ್ಯೆಗೆ ಭೇಟಿ ನೀಡಲಾಗಿದೆ ಎಂಬುದನ್ನು ಅಲ್ಲಗಳೆದ ಅವರು, ‘ಮಂದಿರ ನಿರ್ಮಾಣ ನಂಬಿಕೆಯ ವಿಷಯ, ಅದನ್ನು ರಾಜಕೀಯಗೊಳಿಸಬಾರದು’ ಎಂದರು.

ಹಿಂದುತ್ವವನ್ನು ಬಲಪಡಿಸಲು ಶಿವಸೇನೆ, ಬಿಜೆಪಿ ಕೆಲಸ ಮಾಡುತ್ತಿವೆ. ಇದೇ ಕಾರಣಕ್ಕೆ ಮೋದಿ ಅವರು ಹೆಚ್ಚಿನ ಸಂಸದರ ಬಲದೊಂದಿಗೆ ಮತ್ತೆ ಆಡಳಿತಕ್ಕೆ ಬಂದಿದ್ದಾರೆ. ಆದ್ದರಿಂದ ಜನರ ಭಾವನೆಗಳಿಗೆ ಗೌರವ ಕೊಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.