ADVERTISEMENT

ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಫೋಟೊ ಇದ್ದರೆ ನಾಚಿಕೆ ಏಕೆ? ಕೇರಳ ಹೈಕೋರ್ಟ್‌

ಐಎಎನ್ಎಸ್
Published 13 ಡಿಸೆಂಬರ್ 2021, 14:22 IST
Last Updated 13 ಡಿಸೆಂಬರ್ 2021, 14:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೊಚ್ಚಿ: ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಭಾರತದ ಪ್ರಧಾನ ಮಂತ್ರಿಯವರ ಚಿತ್ರವಿದ್ದರೆ ಅದರಲ್ಲಿ ನಾಚಿಕೆಪಡುವಂಥದ್ದೇನಿದೆ? ಎಂದು ಕೇರಳ ಹೈಕೋರ್ಟ್ ಅರ್ಜಿದಾರರೊಬ್ಬರನ್ನು ಸೋಮವಾರ ಪ್ರಶ್ನಿಸಿದೆ.

ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಈ ಪ್ರಶ್ನೆ ಕೇಳಿದರು. ‘ಅವರು ನಮ್ಮ ಪ್ರಧಾನಿಯೇ ಹೊರತು ಬೇರಾವುದೇ ದೇಶದ ಪ್ರಧಾನಿಯಲ್ಲ. ನಮ್ಮ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದವರು. ನಿಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿದ್ದ ಮಾತ್ರಕ್ಕೆ ಸವಾಲು ಹಾಕಲು ಸಾಧ್ಯವಿಲ್ಲ,’ ಎಂದು ನ್ಯಾಯಮೂರ್ತಿ ಹೇಳಿದರು.

‘ ಅವರು ನಮ್ಮ ಪ್ರಧಾನಿ ಎಂಬುದರಲ್ಲಿ ನಾಚಿಕೆಯೇಕೆ? 100 ಕೋಟಿ ಜನರಿಗೆ ಇರದ ಸಮಸ್ಯೆ ನಿಮಗೆ ಮಾತ್ರ ಏಕೆ। ಪ್ರತಿಯೊಬ್ಬರೂ ವಿಭಿನ್ನ ರಾಜಕೀಯ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಆದರೆ ಅವರು ನಮ್ಮ ಪ್ರಧಾನಿ. ನೀವು ಸುಮ್ಮನೆ ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ‘ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಇತರ ದೇಶಗಳಲ್ಲಿ ಹೀಗೆ ಚಿತ್ರ ಹಾಕಿಕೊಳ್ಳುವ ಪದ್ಧತಿ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ, ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ಅವರೆಲ್ಲ ತಮ್ಮ ಪ್ರಧಾನಿಯ ಬಗ್ಗೆ ಹೆಮ್ಮೆಪಡದಿರಬಹುದು. ಆದರೆ ನಮ್ಮ ಪ್ರಧಾನಿಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ನಿಮ್ಮ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿಯ ಭಾವಚಿತ್ರವಿರುವುದಕ್ಕೆ ನೀವು ಹೆಮ್ಮೆಪಡಬೇಕು,’ ಎಂದು ಹೇಳಿದರು.

ಅರ್ಜಿದಾರರು ‘ಜವಾಹರಲಾಲ್ ನೆಹರು ಲೀಡರ್‌ಶಿಪ್ ಇನ್‌ಸ್ಟಿಟ್ಯೂಟ್‌’ನಲ್ಲಿ ರಾಜ್ಯ ಮಟ್ಟದ ಮಾಸ್ಟರ್ ಕೋಚ್ ಆಗಿದ್ದರು. ಅದಕ್ಕೆ ಪ್ರಧಾನಿಯ ಹೆಸರೇ ಇಡಲಾಗಿತ್ತು. ‘ಆ ಹೆಸರನ್ನು ತೆಗೆದುಹಾಕಲು ನೀವು ವಿಶ್ವವಿದ್ಯಾಲಯವನ್ನು ಏಕೆ ಒತ್ತಾಯಿಸಬಾರದು,‘ ಎಂದು ನ್ಯಾಯಮೂರ್ತಿ ಪ್ರಶ್ನೆ ಮಾಡಿದರು.

ಆದರೆ, ಅರ್ಜಿದಾರರ ಪರ ವಕೀಲರು ವಾದವನ್ನು ಮುಂದುವರೆಸಿದರು. ಅಂತಿಮವಾಗಿ ನ್ಯಾಯಾಲಯವು, ಮುಕ್ತ ಮನಸ್ಸಿನಿಂದ ಅರ್ಜಿ ಪರಿಶೀಲಿಸುವುದಾಗಿಯೂ, ವಿಚಾರಣೆಗೆ ಅರ್ಜಿಯು ಅರ್ಹವೇ ಎಂಬುದನ್ನು ಪರಾಮರ್ಶಿಸುವುದಾಗಿಯೂ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.