ಶಿಮ್ಲಾ (ಪಿಟಿಐ): ಕೇಂದ್ರ ಸರ್ಕಾರದ ಎಂಟು ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 31ರಂದು ಶಿಮ್ಲಾದಲ್ಲಿ ನಡೆಯುವ ರ‍್ಯಾಲಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎಂದು ಹಿಮಾಚಲ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಸುರೇಶ್ ಕಶ್ಯಪ್ ಹೇಳಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎಂಟನೇ ವರ್ಷಾಚರಣೆ ಇದಾಗಿದ್ದು, ಐತಿಹಾಸಿಕ ರ‍್ಯಾಲಿಯಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎನ್‌ಡಿಎ ಸರ್ಕಾರದ ಎಂಟು ವರ್ಷಗಳ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ರಾಷ್ಟ್ರ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುವಂತೆ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಬುಧವಾರ ಪ್ರಧಾನಿ ಮೋದಿ ಅವರನ್ನು ಕೋರಿದ್ದರು.
‘ಮೋದಿ ಅವರು ಕಳೆದ ಡಿಸೆಂಬರ್ 27ರಂದು ರಾಜ್ಯಕ್ಕೆ ಬಂದಿದ್ದರು. ಹಿಮಾಚಲ ಪ್ರದೇಶವನ್ನು ಅವರು ತಮ್ಮ ಎರಡನೇ ಮನೆಯಾಗಿ ಪರಿಗಣಿಸಿದ್ದಾರೆ’ ಎಂದು ಸುರೇಶ್ ಕಶ್ಯಪ್ ಹೇಳಿದ್ದಾರೆ.
‘ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಅವರು ಸಹ ರಾಜ್ಯಕ್ಕೆ ಸದ್ಯದಲ್ಲಿಯೇ ಭೇಟಿ ನೀಡಲಿದ್ದಾರೆ. ವರ್ಷಾಂತ್ಯಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಜಯಗಳಿಸಲಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದ ರಾಜ್ಯ ಘಟಕದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.