ADVERTISEMENT

'ಮೋದಿಗೆ ಪ್ರವೇಶವಿಲ್ಲ', ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಬೃಹತ್ ಫಲಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 8:51 IST
Last Updated 10 ಫೆಬ್ರುವರಿ 2019, 8:51 IST
   

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆಂಧ್ರ ಪ್ರದೇಶದ ಗುಂಟೂರ್‌ಗೆ ಭೇಟಿ ನೀಡುವ ಮುನ್ನ, ಮೋದಿಗೆ ಪ್ರವೇಶವಿಲ್ಲ ಎಂಬ ಬೃಹತ್ ಫಲಕವೊಂದರ ಮೂಲಕ ಮೋದಿ ಭೇಟಿಗೆ ವಿರೋಧ ವ್ಯಕ್ತವಾಗಿದೆ.

ಶನಿವಾರ ಗುಂಟೂರ್‌ ಮತ್ತು ವಿಜಯವಾಡದಲ್ಲಿ ಬೃಹತ್ ಜಾಹೀರಾತು ಫಲಕಗಳಲ್ಲಿ "Modi No Entry" "Modi Never Again" ಎಂದು ಬರೆಯಲಾಗಿದ್ದು, ರಾಜ್ಯ ಬಿಜೆಪಿ ಇದರ ವಿರುದ್ಧ ಕಿಡಿ ಕಾರಿದೆ.

ಈ ರೀತಿ ಫಲಕ ಸ್ಥಾಪಿಸಿದ್ದು ಯಾರು ಎಂಬುದರ ಬಗ್ಗೆ ಯಾವುದೇ ಪಕ್ಷ ಹೊಣೆ ಹೊತ್ತಿಲ್ಲ.ಆದರೆ ಈ ಹಿಂದೆ ತೆಲುಗು ದೇಶಂ ಪಾರ್ಟಿ ಜಾಹೀರಾತು ಇದ್ದ ಫಲಕದಲ್ಲಿಯೇ ಮೋದಿ ವಿರೋಧಿ ಘೋಷಣೆ ಕಂಡು ಬಂದಿದ್ದರಿಂದು ಇದು ತೆಲುಗು ದೇಶಂ ಪಾರ್ಟಿಯ ಕೆಲಸ ಆಗಿರಬಹುದು ಎಂದು ಶಂಕಿಸಲಾಗಿದೆ.

ADVERTISEMENT

ಆದಾಗ್ಯೂ, ಈ ಫಲಕದ ಮೂಲಕ ಐದು ಕೋಟಿ ಆಂಧ್ರದ ಜನರ ಪ್ರತಿಭಟನೆ ಕಾಣಿಸುತ್ತಿದೆ ಎಂದು ಟಿಡಿಪಿ ರಾಷ್ಟ್ರೀಯ ವಕ್ತಾರ ದಿನಕರ್ ಲಂಕಾ ಹೇಳಿದ್ದಾರೆ.ಅದೇ ವೇಳೆ ಫಲಕ ಸ್ಥಾಪಿಸಿದ್ದು ಟಿಡಿಪಿ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ.

ಪ್ರಧಾನಿ ವಿರುದ್ಧವಿರುವ ಫಲಕಗಳು ಸ್ಥಾಪಿಸಿರುವ ಬಗ್ಗೆ ಬಿಜೆಪಿ ರಾಜ್ಯ ಮುಖಂಡರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಧಾನಿಯನ್ನು ಅವಹೇಳನ ಮಾಡಿದ ಫಲಕಗಳನ್ನು ತೆರವು ಮಾಡಿ, ಫಲಕ ಸ್ಥಾಪಿಸಿದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.