ADVERTISEMENT

ಆರ್‌ಎಸ್‌ಎಸ್‌ ನಾಯಕತ್ವದ ಕುರಿತು ಒಲವು ತೋರಲು PM ಹತಾಶ ಪ್ರಯತ್ನ: ಕಾಂಗ್ರೆಸ್‌

ಪಿಟಿಐ
Published 11 ಸೆಪ್ಟೆಂಬರ್ 2025, 15:16 IST
Last Updated 11 ಸೆಪ್ಟೆಂಬರ್ 2025, 15:16 IST
ಜೈರಾಮ್‌ ರಮೇಶ್‌–ಪಿಟಿಐ ಚಿತ್ರ
ಜೈರಾಮ್‌ ರಮೇಶ್‌–ಪಿಟಿಐ ಚಿತ್ರ   

ನವದೆಹಲಿ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ 75ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ಪತ್ರಿಕೆಗಳಿಗೆ ಲೇಖನ ಬರೆದಿರುವುದನ್ನು ಕಾಂಗ್ರೆಸ್‌ ಟೀಕಿಸಿದೆ. ಅತಿರಂಜಿತ ಬರಹದ ಮೂಲಕ ಆರ್‌ಎಸ್‌ಎಸ್‌ ನಾಯಕತ್ವದ ಕುರಿತು ಒಲವು ತೋರಲು ಪ್ರಧಾನಿ ಹತಾಶ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದೆ.

‘ಭಾಗವತ್‌ ಅವರಿಗೆ ಆಳವಾದ ಜ್ಞಾನವಿದೆ. ಸಹಾನುಭೂತಿ ಇರುವ ನಾಯಕ ಅವರಾಗಿದ್ದು, 2009ರಿಂದ ಸಂಘಟನೆಯ ಮುಖ್ಯಸ್ಥರಾಗಿ ಅವರು ಶತಮಾನದ ಹೊಸ್ತಿಲಲ್ಲಿರುವ ಆರ್‌ಎಸ್‌ಎಸ್‌ ಅನ್ನು ಮುನ್ನಡೆಸಿದ್ದಾರೆ. ಇದು ಪರಿವರ್ತನೆಯ ಅವಧಿಯಾಗಿದೆ. ‘ವಸುಧೈವ ಕುಟುಂಬ’ ತತ್ವಕ್ಕೆ ಭಾಗವತ್‌ ಅವರು ಜೀವಂತ ಉದಾಹರಣೆಯಾಗಿದ್ದು, ತಮ್ಮ ಸಂಪೂರ್ಣ ಜೀವನವನ್ನು ಸಮಾಜದ ಪರಿವರ್ತನೆ ಹಾಗೂ ಸಾಮರಸ್ಯ, ಭ್ರಾತ್ವತ್ವ ಬಲಪಡಿಸಲು ಶ್ರಮಿಸಿದ್ದಾರೆ’ ಎಂದು ಮೋದಿ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದರು.

‘1893ರ ಸೆ.11ರಂದು ಶಿಕಾಗೊದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ, 2001 ಸೆ.11ರಂದು ಅಮೆರಿಕದಲ್ಲಿ ಅಲ್‌ ಖೈದಾ ಭಯೋತ್ಪಾದಕರು ನಡೆಸಿದ ದಾಳಿಯ ದಿನವನ್ನು ಪ್ರಧಾನಿ ಮೋದಿ ಅವರು ಲೇಖನದಲ್ಲಿ ನೆನಪಿಸಿದ್ದಾರೆ. 1906ರಲ್ಲಿ ಅದೇ ದಿನ ಮಹಾತ್ಮ ಗಾಂಧಿ ಅವರು ಜೊಹಾನೆಸ್‌ಬರ್ಗ್‌ನಲ್ಲಿ ಮೊದಲ ಸತ್ಯಾಗ್ರಹ ನಡೆಸಿದ್ದನ್ನು ಉಲ್ಲೇಖಿಸದಿರುವುದು ಅಚ್ಚರಿ ಮೂಡಿಸಿಲ್ಲ. ಇಡೀ ಜಗತ್ತು ಕ್ರಾಂತಿಕಾರಿ ಕಲ್ಪನೆಯನ್ನು ಮೊದಲ ಬಾರಿ ಆ ದಿನ ಕೇಳಿತು. ಸತ್ಯಾಗ್ರಹದ ಮೂಲವನ್ನು ಪ್ರಧಾನಿಯಿಂದ ನಿರೀಕ್ಷೆ ಮಾಡುವುದು ಸರಿಯಲ್ಲ, ಸತ್ಯ ಎಂಬ ಪದವೇ ಆಪ್ತವಲ್ಲದ ಕಾರಣ ಉಲ್ಲೇಖ ಮಾಡಿಲ್ಲ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

ADVERTISEMENT

ಲೋಕಸಭೆಯ ಕಾಂಗ್ರೆಸ್‌ನ ಮುಖ್ಯ ಸಚೇತಕ ಮಾಣಿಕ್ಯಂ ಟ್ಯಾಗೋರ್‌ ಕೂಡ ಪ್ರಧಾನಿ ನಡೆಯನ್ನು ಟೀಕಿಸಿದ್ದಾರೆ.

‘ಅಡ್ವಾಣಿ ಅವರಿಗೆ 75 ತುಂಬಿದಾಗ ನಿಯಮದಂತೆ ಅವರನ್ನು ಪಕ್ಕಕ್ಕೆ ಸರಿಸಲಾಯಿತು. ಮುರಳಿ ಮನೋಹರ್ ಜೋಶಿ ಅವರಿಗೆ 75 ವರ್ಷವಾದಾಗ ನಿಯಮದಂತೆ ನಿವೃತ್ತಿ ನೀಡಲಾಯಿತು. ಮೋಹನ್‌ ಭಾಗವತ್‌ ಅವರಿಗೆ 75 ತುಂಬಿದಾಗ ಮೋದಿ ಅವರು ಕವನ ಬರೆದು, ಅವರ ಬೌದ್ಧಿಕ ಜ್ಞಾನ ಹಾಗೂ ನಾಯಕತ್ವದ ಕುರಿತು ನಂಬಿಕೆ ವ್ಯಕ್ತಪಡಿಸಿದ್ದಾರೆ. 75ನೇ ವರ್ಷದ ನಿವೃತ್ತಿ ನಿಯಮವು ಒಂದು ತತ್ವವಾಗಿಲ್ಲ, ಕೇವಲ ಅವಕಾಶವಾದಿ ನುಡಿಯಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಅಡ್ವಾಣಿ ಜೋಶಿ ಪಾಲಿಗೆ ಅನ್ವಯಿಸಿದ ನಿಯಮವು ತಮಗೂ ಅನ್ವಯವಾಗಬಹುದು ಎಂದು ಭಾಗವತ್‌ ಮುಂದೆ ಮಂಡಿಯೂರಿದ್ದಾರೆ. ಇದು ಗೌರವವಲ್ಲ ಭಟ್ಟಂಗಿತನ 
ಮಾಣಿಕ್ಯಂ ಟ್ಯಾಗೋರ್‌ ಲೋಕಸಭೆಯ ಕಾಂಗ್ರೆಸ್‌ನ ಮುಖ್ಯ ಸಚೇತಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.