
ನವದೆಹಲಿ: ‘ಕನಿಷ್ಠ ನಾವು ನಮ್ಮ ಮನೆಯಲ್ಲಿದ್ದಾಗ ನಮ್ಮ ಮಾತೃ ಭಾಷೆಯಲ್ಲಿಯೇ ಸಂವಹನ ನಡೆಸಬೇಕು. ಬೇರೆ ರಾಜ್ಯ ಅಥವಾ ಪ್ರದೇಶದಲ್ಲಿದ್ದರೆ, ಆ ಭಾಗದ ಭಾಷೆ ಕಲಿತು ಮಾತನಾಡಬೇಕು. ಆಯಾ ರಾಜ್ಯ–ಪ್ರದೇಶಗಳ ಭಾಷೆ ಕಲಿಯುವುದು ಬಹಳ ಮುಖ್ಯ. ಏಕೆಂದರೆ ಭಾರತದಲ್ಲಿರುವ ಎಲ್ಲಾ ಭಾಷೆಗಳು ‘ರಾಷ್ಟ್ರಭಾಷೆ’ ಆಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ(ಆರ್‌ಎಸ್‌ಎಸ್) ಮೋಹನ್ ಭಾಗವತ್ ಹೇಳಿದ್ದಾರೆ.
ಛತ್ತೀಸಗಢದ ರಾಯಪುರ ಜಿಲ್ಲೆಯ ಸೋನ್‌ಪೈರಿ ಗ್ರಾಮದಲ್ಲಿ ಬುಧವಾರ ನಡೆದ 'ಹಿಂದೂ ಸಮ್ಮೇಳನ'ದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ಭಾರತದಲ್ಲಿರುವ ಎಲ್ಲಾ ಭಾಷೆಗಳು ಸಮಾನವಾದ ಪ್ರಾಮುಖ್ಯತೆ ಹೊಂದಿವೆ ಎಂದು ಒತ್ತಿ ಹೇಳಿದ್ದಾರೆ.
ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಭಾಗವತ್ ಅವರ ಹೇಳಿಕೆ ಮಹತ್ವ ಪಡೆದಿದೆ.
ಇದೇ ವೇಳೆ, ‘ಭಾಷೆ, ಜಾತಿ ಮತ್ತು ಸಂಪತ್ತಿನ ಶ್ರೇಷ್ಠತೆಯನ್ನು ಮೀರಿ ಜನರು ಸಾಮರಸ್ಯದಿಂದ ಬದುಕಬೇಕು’ ಎಂದು ಭಾಗವತ್ ಮನವಿ ಮಾಡಿದ್ದಾರೆ.
ಭಾಗವತ್ ಅವರ ಹೇಳಿಕೆಯನ್ನು ಬಿಜೆಪಿಯ ಅನೇಕ ನಾಯಕರು ಸ್ವಾಗತಿಸಿದ್ದಾರೆ. ಭಾಗವತ್ ಅವರ ಮಾತಿನಲ್ಲಿ ದೇಶವನ್ನು ಒಗ್ಗೂಡಿಸುವ ಸಂದೇಶವಿದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದಾರೆ.
ಏತನ್ಮಧ್ಯೆ, ಭಾಗವತ್ ಹೇಳಿಕೆಯನ್ನಿಟ್ಟುಕೊಂಡು ವಿರೋಧ ಪಕ್ಷಗಳು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿವೆ.
‘ದಕ್ಷಿಣ ಭಾರತದ ಜನರ ಮೇಲೆ ಬಲವಂತವಾಗಿ ಹಿಂದಿ ಭಾಷೆಯನ್ನು ಹೇರುವುದನ್ನು ನಿಲ್ಲಿಸುವಂತೆ ಭಾಗವತ್ ಬಿಜೆಪಿ ನಾಯಕರಿಗೆ ಏಕೆ ಹೇಳುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಪ್ರಶ್ನಿಸಿದ್ದಾರೆ.
‘ಮೋಹನ್ ಭಾಗವತ್ ಅವರ ಹೇಳಿಕೆಗಳು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಮೊದಲು ಅವರು ಇದನ್ನು ತಮ್ಮ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರಿಗೆ ವಿವರಿಸಬೇಕು’ ಎಂದು ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.