ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ರತುಲ್‌ಗೆ ಜಾಮೀನು

ಪಿಟಿಐ
Published 13 ಡಿಸೆಂಬರ್ 2019, 20:16 IST
Last Updated 13 ಡಿಸೆಂಬರ್ 2019, 20:16 IST
   

ನವದೆಹಲಿ: ಬ್ಯಾಂಕ್‌ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿರುವ ಉದ್ಯಮಿ, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಸೋದರಳಿಯ ರತುಲ್‌ ಪುರಿಗೆ ದೆಹಲಿ ನ್ಯಾಯಾಲಯವೊಂದು ಶುಕ್ರವಾರ ಜಾಮೀನು ನೀಡಿದೆ.

5 ಲಕ್ಷದ ಬಾಂಡ್‌ ಹಾಗೂ ಇಬ್ಬರ ಶ್ಯೂರಿಟಿ ಷರತ್ತಿನಡಿ ವಿಶೇಷ ನ್ಯಾಯಾಧೀಶರಾದ ಅರವಿಂದ್‌ ಕುಮಾರ್‌ ಜಾಮೀನು ಮಂಜೂರು ಮಾಡಿದರು. ಅಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದಿರುವ ರತುಲ್‌ ಪುರಿ, ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ. ಆರೋಪಿಯು ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗಬಾರದು ಹಾಗೂ ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿದೆ.

ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ADVERTISEMENT

ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರತುಲ್‌ ಪುರಿಗೆ ನೀಡಲಾಗಿರುವ ಜಾಮೀನು ರದ್ದುಗೊಳಿಸಲು ಕೋರಿ ಜಾರಿ ನಿರ್ದೇಶನಾಲಯ(ಇ.ಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

ಡಿಸೆಂಬರ್‌ 2ರಂದು ವಿಚಾರಣಾ ನ್ಯಾಯಾಲಯವು ರತುಲ್‌ ಪುರಿಗೆ ಜಾಮೀನು ನೀಡಿತ್ತು. ಇದನ್ನು ರದ್ದುಗೊಳಿಸಲು ಆಗ್ರಹಿಸಿ ಇ.ಡಿ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.