ಹೈದರಾಬಾದ್: ಆನ್‌ಲೈನ್ ವೇದಿಕೆಗಳಲ್ಲಿನ ಬೆಟ್ಟಿಂಗ್ ಮತ್ತು ಜೂಜಾಟ ವೇದಿಕೆಗಳಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟ ರಾಣಾ ದಗ್ಗುಬಾಟಿ ವಿಚಾರಣೆಗೆ ಗೈರಾಗಿದ್ದು, ಆಗಸ್ಟ್ 11ರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಹೊಸದಾಗಿ ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ನಾಲ್ಕು ನಟರಿಗೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು ಮತ್ತು ವಿವಿಧ ದಿನಾಂಕಗಳಲ್ಲಿ ಇಲ್ಲಿನ ತನ್ನ ಪ್ರಾದೇಶಿಕ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ರಾಣಾ ದಗ್ಗುಬಾಟಿ ಅವರು ಬುಧವಾರ ವಿಚಾರಣೆಗೆ ಹಾಜರಾಗಬೇಕಿತ್ತು. ಈ ನಡುವೆ, ತನ್ನ ವಿರುದ್ಧದ ವಿಚಾರಣೆಯನ್ನು ಮುಂದೂಡುವಂತೆ ರಾಣಾ ದಗ್ಗುಬಾಟಿ ಮನವಿ ಮಾಡಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.
ರಾಣಾ ದಗ್ಗುಬಾಟಿ ಮಾತ್ರವಲ್ಲದೆ, ಪ್ರಕಾಶ್ ರಾಜ್ (60) ಅವರಿಗೂ ಜುಲೈ 30ಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಜೊತೆಗೆ, ವಿಜಯ್ ದೇವರಕೊಂಡ (36) ಅವರಿಗೆ ಆಗಸ್ಟ್ 6 ಮತ್ತು ಲಕ್ಷ್ಮಿ ಮಂಚು (47) ಅವರಿಗೆ ಆಗಸ್ಟ್ 13ಕ್ಕೆ ಹಾಜರಾಗುವಂತೆ ಇ.ಡಿ ಸೂಚಿಸಿತ್ತು.
ಹಣ ಅಕ್ರಮ ವರ್ಗಾವಣೆ ಪ್ರಕರಣದ ಭಾಗವಾಗಿ ವಿವಿಧ ಬೆಟ್ಟಿಂಗ್ ಅಪ್ಲಿಕೇಷನ್‌ಗಳ ನಿರ್ವಹಣಾ ಸಿಬ್ಬಂದಿ ಸೇರಿದಂತೆ ಒಟ್ಟು 28 ನಟರು, ಜನಪ್ರಿಯ ವ್ಯಕ್ತಿಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ಪ್ರಭಾವಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.