ADVERTISEMENT

ದೇಶದಲ್ಲಿ ಚುರುಕುಗೊಂಡ ಮುಂಗಾರು: ಅಸ್ಸಾಂನಲ್ಲಿ ಮುಂದುವರೆದ ಪ್ರವಾಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2023, 10:44 IST
Last Updated 24 ಜೂನ್ 2023, 10:44 IST
ಮುಂಗಾರು ಮಳೆ
ಮುಂಗಾರು ಮಳೆ    

ಬೆಂಗಳೂರು: ದೇಶದಲ್ಲಿ ಮುಂದಿನ ಮೂರು ದಿನಗಳ ಒಳಗಾಗಿ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದೆ.

ಜೂನ್‌ 25, 26ರ ಒಳಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಸುರಿಯಲಿದೆ. ಬಹು ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳು ಮುನ್ನಡೆಯುವ ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಐಎಂಡಿ ಹೇಳಿದೆ.

ಇಂದು ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ಮಹಾರಾಷ್ಟ್ರದ ಮುಂಬೈ, ರಾಯಗಡ್, ಥಾಣೆ ಹಾಗೂ ಹಲವು ಭಾಗಗಳಲ್ಲಿ ಮುಂಗಾರು ಪ್ರವೇಶ ಮಾಡಿದೆ. ಮುಂದಿನ 24 ಗಂಟೆಗಳಲ್ಲಿ ವಿದರ್ಭದ ಕೆಲವು ಭಾಗಗಳಲ್ಲಿ ಮಳೆ ಸುರಿಯಲಿದೆ. 

ADVERTISEMENT

ಮುಂದಿನ 48 ಗಂಟೆಗಳಲ್ಲಿ ಛತ್ತೀಸ್‌ಗಢ, ವಾಯವ್ಯ ಬಂಗಾಳ ಕೊಲ್ಲಿಯ ಪ್ರದೇಶಗಳು, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶದ ಕೆಲವು ಭಾಗಗಳು, ಉತ್ತರಾಖಂಡ, ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಿಗೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮುಂಬೈನಲ್ಲಿ ಮಳೆ: ಮುಂಬೈ ನಗರಕ್ಕೆ ಮುಂಗಾರು ಆಗಮಿಸಿದೆ. ಈಗಾಗಲೇ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇಂದು ಬೆಳಗ್ಗೆಯಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಅಸ್ಸಾಂನಲ್ಲಿ ಪ್ರವಾಹ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. 19 ಜಿಲ್ಲೆಗಳಲ್ಲಿ ಸುಮಾರು 4.89 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮಳೆಗೆ ಇಬ್ಬರು ಮೃತಪಟ್ಟಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಮುಳುಗಡೆ ಪ್ರದೇಶಗಳಲ್ಲಿರುವ ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.