ADVERTISEMENT

ಕೋವಿಡ್‌–19 ವಿರುದ್ಧ ಹೋರಾಟ: ಮೇ ತಿಂಗಳು ನಿರ್ಣಾಯಕ

ಪಿಟಿಐ
Published 30 ಏಪ್ರಿಲ್ 2020, 19:45 IST
Last Updated 30 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ ಇದೇ ಮೇ 3ರಂದು ಅಂತ್ಯಗೊಳ್ಳಲಿದೆ. ಹೀಗಾಗಿ ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಮೇ ತಿಂಗಳು ಅತ್ಯಂತ ನಿರ್ಣಾಯಕ ಎಂದು ವೈದ್ಯರು ಪ್ರತಿಪಾದಿಸಿದ್ದಾರೆ.

ಲಾಕ್‌ಡೌನ್‌ ನಂತರದ ದಿನಗಳಲ್ಲಿ ಯಾವ ರೀತಿ ನಿರ್ಬಂಧಗಳನ್ನು ಮುಂದುವರಿಸಲಾಗುತ್ತದೆ ಎಂಬುದು ಮುಖ್ಯ. ಅದರಲ್ಲೂ, ‘ಹಾಟ್‌ಸ್ಪಾಟ್‌’ಗಳಲ್ಲಿ ಕಠಿಣವಾದ ನಿರ್ಬಂಧ ಮತ್ತು ಹಸಿರು ವಲಯಗಳಲ್ಲಿ ಮುನ್ನೆಚ್ಚರಿಕೆಯಿಂದ ಕೂಡಿದ ಸಡಿಲಿಕೆಯಂತಹ ಕಾರ್ಯತಂತ್ರ ಅಗತ್ಯ ಎಂದೂ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಮೇ ತಿಂಗಳಲ್ಲಿ ರೈಲುಗಳ ಸಂಚಾರ, ವಿಮಾನಗಳ ಹಾರಾಟ ಹಾಗೂ ಅಂತರರಾಜ್ಯ ಬಸ್‌ ಸೇವೆ, ಮಾಲ್‌ಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಕಾರ್ಯನಿರ್ವಹಿಸುವುದರ ಮೇಲೆ ಸಂಪೂರ್ಣ ನಿರ್ಬಂಧ ಹೇರಬೇಕು ಎಂದೂ ವೈದ್ಯರು ಹೇಳಿದ್ದಾರೆ.

ADVERTISEMENT

‘ಲಾಕ್‌ಡೌನ್‌ನಿಂದ ಕೊರೊನಾ ವೈರಾಣುವನ್ನು ಕೊಲ್ಲಲು ಸಾಧ್ಯ ಇಲ್ಲ. ಆದರೆ, ಸೋಂಕು ಪ್ರಸರಣವನ್ನು ತಡೆಗಟ್ಟಬಹುದು. ಹೀಗಾಗಿ ರೆಡ್‌ಝೋನ್‌ಗಳಲ್ಲಿ ಇನ್ನೂ ಕೆಲ ವಾರಗಳ ಕಾಲ ಲಾಕ್‌ಡೌನ್‌ ಮುಂದುವರಿಯಬೇಕು’ ಎಂದು ಫೋರ್ಟಿಸ್‌ ನೋಯ್ಡಾ ಆಸ್ಪತ್ರೆಯ ಕ್ರಿಟಿಕಲ್‌ ಕೇರ್‌ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ.ರಾಜೇಶ್‌ ಗುಪ್ತಾ ಹೇಳುತ್ತಾರೆ.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇತ್ತೀಚೆಗೆ ಸಂವಾದ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವೈರಸ್‌ ವಿರುದ್ಧ ಹೋರಾಟವನ್ನು ಮುಂದುವರಿಸುವ ಜೊತೆಗೆ ದೇಶದ ಆರ್ಥಿಕ ಚಟುವಟಿಕೆಗಳತ್ತಲೂ ಗಮನ ಹರಿಸುವುದು ಮುಖ್ಯ ಎಂದು ಹೇಳಿದ್ದರು.

ಮೇ 3ರ ನಂತರವೂ ಲಾಕ್‌ಡೌನ್‌ ವಿಸ್ತರಣೆ ಇರಲಿದೆ. ಆದರೆ, ಹಲವಾರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ವಿನಾಯಿತಿ ಇರಲಿದೆ ಎಂಬುದನ್ನೂ ಪ್ರಧಾನಿ ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.