ADVERTISEMENT

ಮೋದಿ ಭೇಟಿ ಹಿನ್ನೆಲೆ ಗಾಯಾಳು ಪ್ಲಾಸ್ಟರ್ ಬದಲು?: ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಏಜೆನ್ಸೀಸ್
Published 2 ನವೆಂಬರ್ 2022, 21:17 IST
Last Updated 2 ನವೆಂಬರ್ 2022, 21:17 IST
ಅಭಿಜಿತ್ ದೀಪ್ಕೆ ಟ್ವಿಟರ್ ಖಾತೆಯ ಚಿತ್ರ
ಅಭಿಜಿತ್ ದೀಪ್ಕೆ ಟ್ವಿಟರ್ ಖಾತೆಯ ಚಿತ್ರ   

ಮೊರ್ಬಿ: ಮೊರ್ಬಿ ತೂಗುಸೇತುವೆ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ವ್ಯಕ್ತಿಯೊಬ್ಬರ ಎರಡು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಅಕ್ಟೋಬರ್ 31ರಂದು ಒಂದು ಚಿತ್ರವನ್ನು ತೆಗೆಯಲಾಗಿದೆ ಎನ್ನಲಾಗಿದೆ. ಆ ಚಿತ್ರದಲ್ಲಿ ವ್ಯಕ್ತಿಯು ಆಸ್ಪತ್ರೆಯ ಹಾಸಿಗೆಯಲ್ಲಿ ಕೂತಿದ್ದು, ಅವರ ಬಲಗಾಲಿನ ಮಂಡಿಗೆ ಸಣ್ಣ ಬ್ಯಾಂಡೇಜ್‌ ಹಾಕಲಾಗಿದೆ. ಇನ್ನೊಂದು ಚಿತ್ರವನ್ನು ನವೆಂಬರ್ 1ರಂದು ತೆಗೆಯಲಾಗಿದೆ ಎಂದು ಹೇಳಲಾಗಿದೆ. ಎರಡನೇ ಚಿತ್ರದಲ್ಲಿ ವ್ಯಕ್ತಿಯು ಅದೇ ಹಾಸಿಗೆಯಲ್ಲಿ ಮಲಗಿದ್ದು, ಅವರ ಬಲಗಾಲಿಗೆ ಮಂಡಿಯಿಂದ ಪಾದದವರೆಗೆ ಪ್ಲಾಸ್ಟರ್ ಮಾಡಲಾಗಿದೆ.

ಆಸ್ಪತ್ರೆ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಈ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ. ಮೋದಿ ಭೇಟಿ ನೀಡುತ್ತಾರೆ ಎಂಬ ಕಾರಣದಿಂದಲೇ ವ್ಯಕ್ತಿಗೆ ಹೆಚ್ಚಿನ ಬ್ಯಾಂಡೇಜ್‌ ಮಾಡಲಾಗಿದೆ ಎಂದು ಹಲವರು ಟೀಕಿಸಿದ್ದಾರೆ. ‘ವ್ಯಕ್ತಿಯ ಮಂಡಿಗೆ ಗಾಯವಾಗಿತ್ತು. ಅದಕ್ಕೆ ಮೊದಲು ಸಣ್ಣ ಬ್ಯಾಂಡೇಜ್‌ ಮಾಡಲಾಗಿತ್ತು. ನಂತರ ಅವರ ಮೂಳೆ ಮುರಿದದ್ದು ಗೊತ್ತಾಯಿತು. ಹೀಗಾಗಿ ಪೂರ್ಣ ಮಟ್ಟದಲ್ಲಿ ಪ್ಲಾಸ್ಟರ್‌ ಮಾಡಲಾಗಿದೆ’ ಎಂದು ಕೆಲವರು ಸಮಜಾಯಿಷಿ ನೀಡಿದ್ದಾರೆ.

‘ಸತ್ಯವನ್ನು ಮರೆಮಾಚುವ ಯತ್ನವೇ?’: ಮೊರ್ಬಿ ತೂಗುಸೇತುವೆ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಒರೆವಾ ಕಂಪನಿಯ ಫಲಕವನ್ನು, ಸೇತುವೆ ಗೋಪುರದ ಮೇಲೆ ಅಳವಡಿಸಲಾಗಿತ್ತು. ಪ್ರಧಾನಿ ಮೋದಿ ಭೇಟಿಯ ಸಂದರ್ಭದಲ್ಲಿ ಆ ಫಲಕಕ್ಕೆ ಬಟ್ಟೆ ಮುಚ್ಚಿ, ಅದನ್ನು ಮರೆಮಾಚಲಾಗಿತ್ತು. ಇದನ್ನು ಪತ್ರಕರ್ತ ರಾಜದೀಪ್‌ ಸರ್ದೇಸಾಯಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು. ‘ಇದು ಸತ್ಯವನ್ನು ಮರೆಮಾಚುವ ಯತ್ನವೇ’ ಎಂದು ಅವರು ಪ್ರಶ್ನಿಸಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕಾರ್ಯಕರ್ತರು ಯಾವುದೇ ಫಲಕಗಳನ್ನು ಮರೆಮಾಚಿಲ್ಲ ಎಂದು ಬೇರೆ ಚಿತ್ರಗಳನ್ನು ಟ್ವೀಟ್‌ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ದೇಸಾಯಿ ಅವರು, ಫಲಕ ತೆರೆದಿರುವ ಮತ್ತು ಅದನ್ನು ಬಟ್ಟೆಯಿಂದ ಮರೆಮಾಚುತ್ತಿರುವ ವಿಡಿಯೊಗಳನ್ನು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.