ADVERTISEMENT

ಅಯೋಧ್ಯೆ ರಾಮಮಂದಿರ ಶೇ 40ರಷ್ಟು ಪೂರ್ಣ: 2023ರ ಡಿಸೆಂಬರ್‌ನಿಂದ ದರ್ಶನ

ಪಿಟಿಐ
Published 28 ಆಗಸ್ಟ್ 2022, 4:20 IST
Last Updated 28 ಆಗಸ್ಟ್ 2022, 4:20 IST
ಅಯೋಧ್ಯೆ ದೇಗುಲ ನಿರ್ಮಾಣ ಕಾಮಗಾರಿ
ಅಯೋಧ್ಯೆ ದೇಗುಲ ನಿರ್ಮಾಣ ಕಾಮಗಾರಿ    

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾದ ಎರಡು ವರ್ಷಗಳಲ್ಲಿ ಶೇಕಡ 40ಕ್ಕೂ ಹೆಚ್ಚು ಭಾಗ ಪೂರ್ಣಗೊಂಡಿದೆ ಎಂದು ಶ್ರೀ ರಾಮಜನ್ಮಭೂಮಿ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.

2023ರ ಡಿಸೆಂಬರ್‌ನಿಂದ ಭಕ್ತರು ದೇವರಿಗೆ ಪೂಜೆ ಅರ್ಪಿಸಬಹುದು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ತಿಳಿಸಿದ್ದಾರೆ. ಈ ಬಗ್ಗೆ ಪಿಟಿಐ ವರದಿ ಮಾಡಿದೆ.

ದೇವಾಲಯದ ಸುತ್ತಲಿನ ರಸ್ತೆಗಳ ಸುಧಾರಣೆ, ಕಟ್ಟಡಗಳ ತೆರವು ಕಾರ್ಯಾಚರಣೆಗಳು ಸಹ ಭರದಿಂದ ಸಾಗುತ್ತಿವೆ ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ದೇಗುಲ ನಿರ್ಮಾಣ ಕಾಮಗಾರಿ ಶೇ.40ಕ್ಕೂ ಹೆಚ್ಚು ಪೂರ್ಣಗೊಂಡಿದೆ. ಶೇ.80ಕ್ಕೂ ಹೆಚ್ಚು ಸ್ತಂಭದ ಕೆಲಸ ಮುಗಿದಿದೆ. ಡಿಸೆಂಬರ್ 2023ರಿಂದ ದೇವಸ್ಥಾನದಲ್ಲಿ ದರ್ಶನ ಆರಂಭವಾಗುವ ಸಾಧ್ಯತೆ ಇದೆ’ ಎಂದು ರೈ ಹೇಳಿದ್ದಾರೆ.

ದೇಶದಲ್ಲಿ ಮುಂದಿನ ಲೋಕಸಭೆ ಚುನಾವಣೆಯು 2024ರಲ್ಲಿ ನಡೆಯಲಿದೆ.

ಕರಸೇವಕ ಪುರಂನಲ್ಲಿ ನೆಲೆಸಿರುವ ರೈ, ಅಯೋಧ್ಯೆಯಲ್ಲೇ ಠಿಕಾಣಿ ಹೂಡಿದ್ದಾರೆ. ದೇಗುಲದ ನಿರ್ಮಾಣ ಕಾಮಗಾರಿಯ ಉಸ್ತುವಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದು, ನಿರ್ಮಾಣಕ್ಕೆ ಸಂಬಂಧಿಸಿದ ಸಭೆಗಳನ್ನು ನಿತ್ಯ ನಡೆಸುತ್ತಾರೆ. ಪ್ರಗತಿ ಪರಿಶೀಲನೆ ಮಾಡುತ್ತಾರೆ.

ನಿರ್ಮಾಣಕ್ಕೆ ಬಳಸಲಾದ ಹಣದ ಮೂಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರೈ, ‘ದೇವರ ಕಾರ್ಯಕ್ಕೆ ಹಣಕ್ಕೇನು ಕೊರತೆ? ದೇವರ ಚರಣಗಳಲ್ಲಿ ಲಕ್ಷ್ಮಿ ಕುಳಿತಿದ್ದಾಳೆ’ ಎಂದು ಹೇಳಿದ್ದಾರೆ.

ದೇವಾಲಯದ ಗರ್ಭಗುಡಿಯೊಳಗೆ ರಾಜಸ್ಥಾನದ ಮಕ್ರಾನಾ ಬೆಟ್ಟಗಳಿಂದ ತರಲಾದ ಅಮೃತಶಿಲೆಯನ್ನು ಬಳಸಲಾಗುತ್ತಿದೆ ಎಂದು ರೈ ತಿಳಿಸಿದ್ದಾರೆ.

2019ರ ನವೆಂಬರ್ 9ರ ಸುಪ್ರೀಂ ಕೋರ್ಟ್ ತೀರ್ಪು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ದಾರಿ ಮಾಡಿಕೊಟ್ಟಿತು.

2020ರ ಆಗಸ್ಟ್ 5ರಂದು ಮಂದಿರ ನಿರ್ಮಾಣಕ್ಕೆ ಮೋದಿ ಭೂಮಿಪೂಜೆ ಮಾಡಿದ್ದರು.

ಯೋಜನೆಯ ಪ್ರಕಾರ, ರಾಮಮಂದಿರದ ಸುತ್ತಮುತ್ತಲಿನ 70 ಎಕರೆ ಪ್ರದೇಶದಲ್ಲಿ ವಾಲ್ಮೀಕಿ, ಕೇವತ್, ಶಬರಿ, ಜಟಾಯು, ಸೀತಾ, ವಿಘ್ನೇಶ್ವರ (ಗಣೇಶ) ಮತ್ತು ಶೇಷಾವತಾರ (ಲಕ್ಷ್ಮಣ) ದೇವಾಲಯಗಳನ್ನು ಸಹ ನಿರ್ಮಿಸಲಾಗುತ್ತದೆ.

ದೇವಾಲಯದ ನಿರ್ಮಾಣದ ಜೊತೆಗೆ, ಪ್ರಸಿದ್ಧ ಹನುಮಾನಗರ್ಹಿ ಮಂದಿರಕ್ಕೆ ಹೋಗುವ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದ್ದು, ಅಂಗಡಿಗಳು ಮತ್ತು ಮನೆಗಳನ್ನು ಕೆಡವಲಾಗುತ್ತಿದೆ. ಆರಂಭದ ಪ್ರತಿಭಟನೆಗಳ ನಂತರ ಕಾಮಗಾರಿ ಶಾಂತಿಯುತವಾಗಿ ನಡೆಯುತ್ತಿದೆ. ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ಅಂಗಡಿ, ಮನೆಗಳನ್ನು ಸ್ಥಳೀಯರೇ ಸ್ವಯಂ ಪ್ರೇರಿತವಾಗಿ ನೆಲಸಮಗೊಳಿಸುತ್ತಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.