ADVERTISEMENT

ಇಸ್ರೇಲ್‌ನಿಂದ ಮುಂದುವರಿದ ದಾಳಿ: ಗಾಜಾದಿಂದ 52 ಸಾವಿರ ಪ್ಯಾಲೆಸ್ತೀನಿಯರ ಸ್ಥಳಾಂತರ

450 ಕಟ್ಟಡಗಳು ನೆಲಸಮ, ಹಲವರು ಅತಂತ್ರ

ರಾಯಿಟರ್ಸ್
Published 18 ಮೇ 2021, 14:35 IST
Last Updated 18 ಮೇ 2021, 14:35 IST
ದಕ್ಷಿಣ ಗಾಜಾದ ರಫಾಹ್‌ನಲ್ಲಿ ಇಸ್ರೇಲ್‌ ವಾಯುದಾಳಿಯಿಂದ ನೆಲಸಮಗೊಂಡ ಕಟ್ಟಡದ ಅವಶೇಷಗಳನ್ನು ಮಂಗಳವಾರ ಪರಿಶೀಲಿಸುತ್ತಿರುವ ಪ್ಯಾಲೆಸ್ತೈನ್‌ ರಕ್ಷಣಾ ತಂಡದ ಸಿಬ್ಬಂದಿ
ದಕ್ಷಿಣ ಗಾಜಾದ ರಫಾಹ್‌ನಲ್ಲಿ ಇಸ್ರೇಲ್‌ ವಾಯುದಾಳಿಯಿಂದ ನೆಲಸಮಗೊಂಡ ಕಟ್ಟಡದ ಅವಶೇಷಗಳನ್ನು ಮಂಗಳವಾರ ಪರಿಶೀಲಿಸುತ್ತಿರುವ ಪ್ಯಾಲೆಸ್ತೈನ್‌ ರಕ್ಷಣಾ ತಂಡದ ಸಿಬ್ಬಂದಿ   

ಜಿನಿವಾ (ರಾಯಿಟರ್ಸ್‌): ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆಯು ನಡೆಸಿದ ನಿರಂತರ ವಾಯುದಾಳಿಯಿಂದ ಸುಮಾರು 450 ಕಟ್ಟಡಗಳು ಜಖಂ ಅಥವಾ ನೆಲಸಮಗೊಂಡಿವೆ. 52 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೀನಿಯರನ್ನು ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆಯ ನೆರವು ತಂಡದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಅಲ್ಲದೆ, ವಾಯುದಾಳಿಯ ನಂತರ ಅತಂತ್ರರಾಗಿರುವ 47 ಸಾವಿರಕ್ಕೂ ಅಧಿಕ ಜನರು ವಿಶ್ವಸಂಸ್ಥೆಯು ಗಾಜಾದಲ್ಲಿ ನಡೆಸುತ್ತಿರುವ ವಿವಿಧ ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವಿಶ್ವಸಂಸ್ಥೆಯು ಸಂಯೋಜನೆ ಮತ್ತು ಮಾನವೀಯ ವ್ಯವಹಾರಗಳ ಕಚೇರಿಯ ವಕ್ತಾರರಾದ ಜೆನ್ಸ್‌ ಲಾರ್ಕೆ ಅವರು ತಿಳಿಸಿದ್ದಾರೆ.

ಅವರ ಪ್ರಕಾರ, ಗಾಜಾದಲ್ಲಿ 132 ಕಟ್ಟಡಗಳು ಪೂರ್ಣ, 316 ಕಟ್ಟಡಗಳು ಭಾಗಶಃ ಜಖಂಗೊಂಡಿವೆ. ಇವುಗಳಲ್ಲಿ ಆರು ಆಸ್ಪತ್ರೆಗಳು ಮತ್ತು 9 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಅಗತ್ಯ ವಸ್ತುಗಳ ಪೂರೈಕೆಗಾಗಿ ಇಸ್ರೇಲ್‌ ಗಡಿಯ ಒಂದು ಭಾಗವನ್ನು ಮುಕ್ತಗೊಳಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.

ADVERTISEMENT

ಪ್ರಾಣಹಾನಿ ಇಲ್ಲ, ದಾಳಿ ನಿರಂತರ: ಕಳೆದ 24 ಗಂಟೆಗಳಲ್ಲಿ ಇಸ್ರೇಲ್‌ ದಾಳಿಯಿಂದ ಪ್ಯಾಲೆಸ್ಟೀನಿಯರು ಮೃತರಾದ ಘಟನೆ ವರದಿಯಾಗಿಲ್ಲ ಎಂದು ಗಾಜಾ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ, ಇಸ್ರೇಲಿ ಸೇನೆಯ ಮುಖ್ಯ ವಕ್ತಾರರು, ‘ಮುಂದಿನ 24 ಗಂಟೆಗಳು ಕೂಡಾ ನಿಗದಿತ ಗುರಿಯತ್ತ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಇಸ್ರೇಲಿ ರಕ್ಷಣಾ ಪಡೆಗಳು ಈಗ ಕದನವಿರಾಮ ಕುರಿತು ಚರ್ಚಿಸುತ್ತಿಲ್ಲ. ನಾವು ಈಗ ದಾಳಿಯತ್ತ ಗಮನ ಕೇಂದ್ರೀಕರಿಸಿದ್ದೇವೆ’ ಎಂದು ಸೇನಾ ಬಾನುಲಿಗೆ ತಿಳಿಸಿದರು.

ಗಾಜಾದ ನಿವಾಸಿಗಳ ಪ್ರಕಾರ, ಕಳೆದ ರಾತ್ರಿಯಿಂದೀಚೆಗೆ ಸುಮಾರು 60 ಬಾರಿ ವಾಯುದಾಳಿ ನಡೆದಿದೆ.

ಜೆರುಸೆಲೆಂ ವರದಿ (ಎ.ಪಿ): ಇನ್ನೊಂದೆಡೆ ಗಾಜಾ ಕೂಡಾ ಪ್ರತಿ ದಾಳಿ ನಡೆಸಿದ್ದು, ಇಸ್ರೇಲ್‌ ಮೇಲೆ ರಾಕೆಟ್‌ಗಳ ಸುರಿಮಳೆಗರೆದಿದೆ. ಬಹುತೇಕ ಇಸ್ರೇಲ್‌ನ ನಗರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ.

ಇಸ್ರೇಲಿ ಸೇನೆ ಮತ್ತು ಪ್ಯಾಲೆಸ್ಟೀನಿಯರ ನಡುವೆ ಘರ್ಷಣೆ ತೀವ್ರಗೊಂಡು ದಾಳಿ ನಡೆದಂತೆ ಇಸ್ರೇಲ್‌ನಲ್ಲಿ ನಿವಾಸಿಗಳು ಸುರಕ್ಷಿತ ತಾಣ ಅರಸಿಹೋಗುವುದು ಸಾಮಾನ್ಯವಾಗಿದೆ.

‘ದಾಳಿ ನಡೆದಂತೆ ನಾವು ಹೊರಗೆ ಓಡಿ ಬಂದೆವು. ನಮ್ಮದೂ ಸೇರಿ ಅನೇಕ ಕಾರುಗಳು ಉರಿಯುತ್ತಿದ್ದವು. ಬಾಗಿಲು ಕಿಟಕಿಗಳು ಜಖಂಗೊಂಡಿದ್ದವು. ನಮಗೆ ದಿಗ್ಭ್ರಮೆಯಾಗಿದೆ. ಅದು ದುಃಸ್ವಪ್ನ‘ ಎಂದು 24 ವರ್ಷದ ಫರಾಗ್ ಹೇಳಿದರು. ಮತ್ತೆ ದಾಳಿ ನಡೆಯುವ ಭೀತಿಯಿಂದ ನಿದ್ರೆಯೂ ಬರುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

ಕಳೆದ ವಾರ ಯುದ್ಧ ಆರಂಭವಾದ ಬಳಿಕ ಇಸ್ರೇಲಿ ನಗರಗಳ ಮೇಲೆ ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಸಂಘಟನೆಗಳು ಸುಮಾರು 3,200 ಬಾರಿ ರಾಕೆಟ್‌ ದಾಳಿ ನಡೆದಿವೆ. ಹೆಚ್ಚಿನವರು ಗುರಿ ತಪ್ಪಿದರೂ, ನೂರಾರು ರಾಕೆಟ್‌ಗಳು ನಿಗದಿತ ಗುರಿ ತಲುಪಿವೆ. ದಾಳಿಯಿಂದ ಮನೆ, ವಸತಿ ಸಂಕೀರ್ಣ, ಆಶ್ರಯತಾಣ ಎಲ್ಲವೂ ಜಖಂಗೊಂಡಿವೆ.

ಇದುವರೆಗೂ ಇಸ್ರೇಲ್‌ನಲ್ಲಿ ಸುಮಾರು 10 ಜನರು ಸತ್ತಿದ್ದಾರೆ. ಹೆಚ್ಚಿನವರು ರಾಕೆಟ್‌ ದಾಳಿಯಿಂದಲೇ ಸತ್ತಿದ್ದಾರೆ. ಇವರಲ್ಲಿ ಸೈನಿಕ, 5 ವರ್ಷದ ಬಾಲಕ, ಇಬ್ಬರು ಯುವಕರು ಸೇರಿದ್ದಾರೆ. 106 ಜನರು ಗಾಯಗೊಂಡಿದ್ದಾರೆ.

ಗಾಜಾದಲ್ಲಿ 212 ಪ್ಯಾಲೆಸ್ಟೀನಿಯನ್ನರು ಇಸ್ರೇಲ್‌ನ ವಾಯುದಾಳಿಯಿಂದ ಸತ್ತಿದ್ದಾರೆ. ಇವರಲ್ಲಿ 61 ಮಕ್ಕಳು, 36 ಮಹಿಳೆಯರು ಸೇರಿದ್ದು, ಸುಮಾರು 1,400 ಜನರು ಗಾಯಗೊಂಡಿದದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.