ADVERTISEMENT

ದೇಶದ ಸರ್ಕಾರಿ ಶಾಲೆಗಳ ಸ್ಥಿತಿ ಗುಜರಿಗಿಂತ ಕೆಟ್ಟದಾಗಿದೆ: ಮೋದಿಗೆ ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2022, 10:45 IST
Last Updated 7 ಸೆಪ್ಟೆಂಬರ್ 2022, 10:45 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ದೇಶದಲ್ಲಿ ಶೇ 80ರಷ್ಟು ಸರ್ಕಾರಿ ಶಾಲೆಗಳ ಸ್ಥಿತಿ ಜಂಕ್‌ಯಾರ್ಡ್‌ಗಳಿಗಿಂತ (ಗುಜರಿ ಅಂಗಡಿ) ಕೆಟ್ಟದಾಗಿದೆ. ಶಾಲೆಗಳ ದುರಸ್ತಿಗೆ ಯೋಜನೆರೂಪಿಸುವಂತೆ ಮನವಿ ಮಾಡಿದ್ದಾರೆ.

ದೇಶದ 14,500 ಶಾಲೆಗಳನ್ನು ಆಧುನಿಕಗೊಳಿಸಲಾಗುವುದು ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್‌, ಇದು ‘ಸಮುದ್ರದಲ್ಲಿನ ಒಂದು ಹನಿ’ ಮಾತ್ರ ಎಂದು ಹೇಳಿದ್ದರು. ಜತೆಗೆ, ‘ಮುಂದಿನ ಐದು ವರ್ಷಗಳಲ್ಲಿ ದೇಶದ 10 ಲಕ್ಷ ಸರ್ಕಾರಿ ಶಾಲೆಗಳನ್ನೂ ಉನ್ನತೀಕರಿಸಲು ಯೋಜನೆ ಸಿದ್ಧಪಡಿಸಿ’ ಎಂದು ಪ್ರಧಾನಿ ಮೋದಿ ಅವರಿಗೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

‘ಭಾರತದಲ್ಲಿ ಪ್ರತಿದಿನ 27 ಕೋಟಿ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದಾರೆ. ಅದರಲ್ಲಿ 18 ಕೋಟಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶೇ 80ರಷ್ಟು ಸರ್ಕಾರಿ ಶಾಲೆಗಳ ಸ್ಥಿತಿ ಜಂಕ್‌ಯಾರ್ಡ್‌ಗಿಂತ (ಗುಜರಿ ಅಂಗಡಿ) ಕೆಟ್ಟದಾಗಿದೆ. ಇಂತಹ ಕಟ್ಟಡಗಳಲ್ಲಿ ಕೋಟ್ಯಂತರ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರೆ, ದೇಶ ಹೇಗೆ ಅಭಿವೃದ್ಧಿ ಹೊಂದುತ್ತದೆ ಎಂಬುದನ್ನು ಊಹಿಸಿಕೊಳ್ಳಿ’ ಎಂದು ಕೇಜ್ರಿವಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ನೀವು (ಮೋದಿ) 14,500 ಶಾಲೆಗಳ ಆಧುನೀಕರಣಕ್ಕೆ ಯೋಜನೆ ರೂಪಿಸಿದ್ದೀರಿ. ನಿಮ್ಮ ನಿರ್ಧಾರ ಸ್ವಾಗತಾರ್ಹ. ಆದರೆ, ಇದೇ ಪ್ರಮಾಣದಲ್ಲಿ ಶಾಲೆಗಳ ಅಭಿವೃದ್ಧಿ ಕೈಗೊಂಡರೆ, ದೇಶದಲ್ಲಿರುವ 10.5 ಲಕ್ಷ ಶಾಲೆಗಳನ್ನೂ ಮೇಲ್ದರ್ಜೆಗೇರಿಸಲು 100 ವರ್ಷ ಬೇಕಾಗಬಹುದು’ ಎಂದಿದ್ದಾರೆ.

ಶಿಕ್ಷಕರ ದಿನದಂದು (ಸೋಮವಾರ) ಪ್ರಧಾನಿ ಮೋದಿ ಅವರು ಟ್ವೀಟ್‌ ಮಾಡಿ, ‘ದೇಶದ 14,500 ಶಾಲೆಗಳನ್ನು ‘ಪಿಎಂ–ಶ್ರೀ ಯೋಜನಾ’ ಮೂಲಕ ಆಧುನೀಕರಣಗೊಳಿಸಲಾಗುವುದು. ಶಾಲೆಗಳಿಗೆ ಆಧುನಿಕ ಮೂಲಸೌಕರ್ಯ ಅಂದರೆ ಒತ್ತಮ ಗುಣಮಟ್ಟದ ಪ್ರಯೋಗಾಲಯ, ಸ್ಮಾರ್ಟ್‌ ತರಗತಿ, ಗ್ರಂಥಾಲಯ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, ‘ಮುಂದಿನ ಐದು ವರ್ಷಗಳಲ್ಲಿ ದೇಶದ 10 ಲಕ್ಷ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಯೋಜನೆಯನ್ನು ಸಿದ್ಧಪಡಿಸಬೇಕು’ ಎಂದು ಆಗ್ರಹಿಸಿದ್ದರು.

ಪ್ರತಿ ಮಗುವಿಗೆ ಉಚಿತ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸದೆ ಭಾರತವು ವಿಶ್ವದ ನಂಬರ್ ಒನ್ ದೇಶವಾಗಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.