ADVERTISEMENT

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ 39 ಲಕ್ಷ ‘ಮತದಾರರ’ ಸೇರ್ಪಡೆ: ರಾಹುಲ್‌

ಮತದಾರರ ಪಟ್ಟಿಯಲ್ಲಿ ಮಹಾ ಅಕ್ರಮ: ಆರೋಪ

ಪಿಟಿಐ
Published 7 ಫೆಬ್ರುವರಿ 2025, 18:57 IST
Last Updated 7 ಫೆಬ್ರುವರಿ 2025, 18:57 IST
   

ನವದೆಹಲಿ: ‘ಮಹಾರಾಷ್ಟ್ರದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗಳ ನಡುವಿನ ಐದು ತಿಂಗಳ ಅವಧಿಯಲ್ಲಿ ಸುಮಾರು 39 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿತ್ತು’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

‘ಪಟ್ಟಿಯಲ್ಲಿ ದೋಷವಿದೆ ಎಂದು ತಿಳಿದಿರುವುದರಿಂದಲೇ ಚುನಾವಣೆಗೆ ಬಳಸಿದ ಮತದಾರರ ಪಟ್ಟಿಯನ್ನು ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿ ಪಕ್ಷಗಳಿಗೆ ನೀಡಲು ಆಯೋಗವು ನಿರಾಕರಿಸುತ್ತಿದೆ’ ಎಂದು ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. 

‘ಪಟ್ಟಿಯಲ್ಲಿ ದೋಷವಿದೆ ಎಂಬ ಅರಿವು ಆಯೋಗಕ್ಕಿದೆ. ಸೌಮ್ಯವಾಗಿ ಹೇಳುವುದಾದರೆ, ಆಯೋಗಕ್ಕೆ ಮತದಾರರ ಪಟ್ಟಿಯ ಮೇಲೆ ಹಿಡಿತ ಇರಲಿಲ್ಲ. ಕಟುವಾಗಿ ಹೇಳುವುದಾದರೆ ಆಯೋಗವೇ ಮತದಾರರ ಪಟ್ಟಿಗಳನ್ನು ತಿರುಚಿದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಎಂವಿಎ ಮೈತ್ರಿಪಕ್ಷಗಳಾದ ಎನ್‌ಸಿಪಿ (ಶರದ್ ಪವಾರ್‌ ಬಣ) ನಾಯಕಿ ಸುಪ್ರಿಯಾ ಸುಳೆ ಮತ್ತು ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ನಾಯಕ ಸಂಜಯ್‌ ರಾವುತ್‌ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

‘ಚುನಾವಣೆಯಲ್ಲಿ ಬಳಸಿದ್ದ ಮತದಾರರ ಕ್ರೋಡೀಕೃತ ಪಟ್ಟಿಗಳನ್ನು ಪ್ರತಿಪಕ್ಷಗಳಿಗೆ ಒದಗಿಸಲು ಆಯೋಗವು ನಿರಾಕರಿಸಿದರೆ, ನಾವು ನ್ಯಾಯಾಂಗದ ಮೆಟ್ಟಿಲು ಏರಲಿದ್ದೇವೆ’ ಎಂದು ಹೇಳಿದರು.

‘2019 ಮತ್ತು 2024ರ ಸಾರ್ವತ್ರಿಕ ಚುನಾವಣೆಗಳ ನಡುವೆ ರಾಜ್ಯದಲ್ಲಿ 32 ಲಕ್ಷ ಮತದಾರರ ಹೆಸರುಗಳು ಸೇರ್ಪಡೆ ಆಗಿವೆ. ಆದರೆ, 2024ರಲ್ಲಿ ಈ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆದ ದಿನಗಳ ನಡುವಿನ ಐದು ತಿಂಗಳಲ್ಲಿ 39 ಲಕ್ಷ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ’ ಎಂದು ಹೇಳಿದರು.

‘ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಮೂಲಭೂತ ಅಗತ್ಯ’ ಎಂಬ ಡಾ. ಅಂಬೇಡ್ಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ,  ‘ಆಯೋಗವು ಮತದಾರರ ವಿವರಗಳನ್ನು ಫೋಟೊ, ವಿಳಾಸ, ಹೆಸರುಗಳ ಸಮೇತ ನೀಡದಿದ್ದರೆ, ಅದರ ನೇರ ಅರ್ಥ ‘ಸಂವಿಧಾನವನ್ನು ಪೂರ್ಣವಾಗಿ ಅಸ್ತವ್ಯಸ್ತಗೊಳಿಸುವತ್ತ ದೇಶ ಮುನ್ನಡೆಯುತ್ತಿದೆ ಎಂಬುದೇ ಆಗಿದೆ’ ಎಂದು ವ್ಯಾಖ್ಯಾನಿಸಿದರು.

‘ಹಿಮಾಚಲ ಪ್ರದೇಶ ರಾಜ್ಯದ ಮತದಾರರ ಸಂಖ್ಯೆಗೆ ಸಮನಾದ ಮತದಾರರನ್ನು ಮಹಾರಾಷ್ಟ್ರದಲ್ಲಿ ಸೇರ್ಪಡೆ ಮಾಡಲಾಗಿದೆ. ಹೀಗೆ ಸೇರಿಸಲಾದ ಹೊಸ ಮತಗಳು ನೇರವಾಗಿ ಬಹುತೇಕ ಎಲ್ಲವೂ ಬಿಜೆಪಿಗೇ ಹೋಗಿವೆ’ ಎಂದೂ ರಾಹುಲ್‌ ದೂರಿದರು.

‘ಮಹಾ’ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿದ್ದ ಒಟ್ಟು ಸಂಖ್ಯೆಯು ರಾಜ್ಯದ ವಯಸ್ಕರರ ಜನಸಂಖ್ಯೆಗಿಂತ ಹೆಚ್ಚಾಗಿದೆ. ಆಯೋಗ ವಿವರ ನೀಡದಿದ್ದರೆ ಕೋರ್ಟ್‌ ಮೆಟ್ಟಿಲೇರುತ್ತೇವೆ.
ರಾಹುಲ್‌ ಗಾಂಧಿ, ಕಾಂಗ್ರೆಸ್ ಮುಖಂಡ

‘ಇದರ ಜೊತೆಗೆ ವಿಧಾನಸಭೆ ಚುನಾವಣೆಗೆ ಪೂರ್ವದಲ್ಲಿ ಹಲವು ಮತದಾರರ ಹೆಸರುಗಳನ್ನು ಕೈಬಿಡಲಾಗಿತ್ತು ಅಥವಾ ವರ್ಗಾಯಿಸಲಾಗಿತ್ತು. ಇವು ಬಹುತೇಕ ದಲಿತರು, ಬುಡಕಟ್ಟು ಜನರು, ಅಲ್ಪಸಂಖ್ಯಾತ ಸಮುದಾಯದ ಮತದಾರರದ್ದಾಗಿದ್ದವು. ಸೇರ್ಪಡೆ ಮಾಡಿದ್ದಕ್ಕಿಂತಲೂ ಹೀದೆ ಕೈಬಿಟ್ಟಿರುವ ಹೆಸರುಗಳ ಸಂಖ್ಯೆಯೇ ಹೆಚ್ಚಿರುವ ಶಂಕೆಯೂ ಇದೆ’ ಎಂದು ಹೇಳಿದರು.

‘ಕಾಮಟಿ ವಿಧಾನಸಭಾ ಕ್ಷೇತ್ರದ ಉದಾಹರಣೆ ನೀಡಿದ ಅವರು, ಕಾಂಗ್ರೆಸ್‌ ಪಕ್ಷ ಇಲ್ಲಿ ಲೋಕಸಭೆ ಚುನಾವಣೆಯಲ್ಲಿ 1.36 ಲಕ್ಷ ಮತಗಳನ್ನು ಪಡೆದಿದ್ದು, ವಿಧಾನಸಭೆ ಚುನಾವಣೆಯಲ್ಲೂ ಅದೇ ಸಂಖ್ಯೆಯ ಮತಗಳನ್ನು ಪಡೆದಿದೆ. ಆದರೆ, ಬಿಜೆಪಿ ಪಡೆದ ಮತಗಳು 1.19 ಲಕ್ಷದಿಂದ 1.75 ಲಕ್ಷಕ್ಕೆ ಏರಿವೆ. ಎರಡೂ ಚುನಾವಣೆಗಳ ನಡುವೆ ಕಾಂಗ್ರೆಸ್ ಪಡೆದ ಮತಗಳು ಸ್ಥಿರವಾಗಿದ್ದರೆ, ಬಿಜೆಪಿ ಪಡೆದಿರುವ ಮತಗಳು 35 ಸಾವಿರ ಮತಗಳಷ್ಟು ಹೆಚ್ಚಾಗಿವೆ. ಇವುಗಳಲ್ಲಿ ಬಹುತೇಕ ಹೊಸದಾಗಿ ಸೇರಿಸಿದ ಮತದಾರರದ್ದೇ ಆಗಿದೆ’ ಎಂದು ಹೇಳಿದರು.

‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂದಾಜಿನ ಪ್ರಕಾರ, ಮಹಾರಾಷ್ಟ್ರದ ಜನಸಂಖ್ಯೆ 9.54 ಕೋಟಿ. ಅಲ್ಲಿ 9.7 ಕೋಟಿ ಮತದಾರರಿದ್ದು, ವಯಸ್ಕರರ ಜನಸಂಖ್ಯೆಗಿಂತಲೂ ಮತದಾರರ ಸಂಖ್ಯೆ ಹೆಚ್ಚಿರುವುದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ತಿರುಚಲು ಬಿಡುವುದಿಲ್ಲ: ಖರ್ಗೆ

‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಳಸಿದ್ದ ಮತದಾರರ ಕ್ರೋಡೀಕೃತ ಪಟ್ಟಿಯನ್ನು ಭಾವಚಿತ್ರದ ಸಮೇತ ಎಕ್ಸೆಲ್‌ನಲ್ಲಿ ಒದಗಿಸಲಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.  

‘ಮಹಾರಾಷ್ಟ್ರ ಮತದಾರರ ಪಟ್ಟಿಯಲ್ಲಿ ದೊಡ್ಡ ವ್ಯತ್ಯಾಸ ಬಯಲಾಗಿದೆ. ‘ಪ್ರಜಾಪ್ರಭುತ್ವದ ತಾಯಿ ಇದ್ದಂತೆ. ಅದನ್ನು ‘ತಿರುಚಿದ ಪ್ರಜಾಪ್ರಭುತ್ವ’ವನ್ನಾಗಿಸಲು ಬಿಡುವುದಿಲ್ಲ’ ಎಂದೂ ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ. 

ಲಿಖಿತವಾಗಿ ಪ್ರತಿಕ್ರಿಯಿಸುತ್ತೇವೆ: ಚುನಾವಣಾ ಆಯೋಗ

‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಳಸಿದ ಮತದಾರರ ಪಟ್ಟಿ ಕುರಿತು ವಾಸ್ತವಾಂಶದ ಜೊತೆಗೆ ಲಿಖಿತವಾಗಿ ಪ್ರತಿಕ್ರಿಯಿಸುತ್ತೇವೆ’ ಎಂದು ಚುನಾವಣಾ ಅಯೋಗವು ಪ್ರತಿಕ್ರಿಯಿಸಿದೆ. ರಾಹುಲ್‌ ಗಾಂಧಿ ಅವರ ಆರೋಪದ ಹಿಂದೆಯೇ ಅವರ ಹೆಸರನ್ನು ಉಲ್ಲೇಖಿಸದೇ ಆಯೋಗವು ‘ಎಕ್ಸ್‌’ನಲ್ಲಿ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದೆ.

‘ಮತದಾರರು ಮುಖ್ಯ ಎಂಬುದು ನಿಜ. ರಾಜಕೀಯ ಪಕ್ಷಗಳನ್ನೂ ಪ್ರಮುಖ ಭಾಗಿದಾರರನ್ನಾಗಿ ಆಯೋಗ ಪರಿಗಣಿಸಲಿದೆ. ಪಕ್ಷಗಳ ನಿಲುವು ಸಲಹೆ ಪ್ರಶ್ನೆಗಳನ್ನು ಪ್ರಮುಖವಾಗಿ ಪರಿಗಣಿಸಲಿದೆ’ ಎಂದು ಹೇಳಿದೆ. ‘ವಸ್ತುಸ್ಥಿತಿ ವಿವರ ಮತದಾರರ ಪಟ್ಟಿ ರೂಪಿಸಲು ದೇಶದಾದ್ಯಂತ ಬಳಸಲಾಗುವ ಕ್ರಮ ಕುರಿತಂತೆ ಲಿಖಿತವಾಗಿ ಪ್ರತಿಕ್ರಿಯಿಸಲಿದೆ’ ಎಂದು ಹೇಳಿದೆ. 

ಆರೋಪ ನಿರಾಧಾರ: ಫಡಣವೀಸ್‌

ನಾಗ್ಪುರ: ಮಹಾರಾಷ್ಟ್ರದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪವನ್ನು ಬಿಜೆಪಿ ನಾಯಕ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ತಳ್ಳಿಹಾಕಿದ್ದಾರೆ. ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಪರಾಭವಗೊಳ್ಳುವುದರ ಸುಳಿವು ಸಿಕ್ಕಿರುವಂತೆಯೇ ಅದನ್ನು ಮರೆಮಾಚಲು ಅವರೀಗ ಆರೋಪ ಹೊರಿಸುತ್ತಿದ್ದಾರೆ ಎಂದೂ ಫಡಣವೀಸ್‌ ಇಲ್ಲಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.