
ಇಂದು ಪ್ರಧಾನಿ ಮೋದಿಯಿಂದ ಎ.ಐ ಶೃಂಗ ಉದ್ಘಾಟನೆ, ಪೈಜಾಮದ ದಾರ ಎಳೆಯುವುದೂ ಅತ್ಯಾಚಾರ ಎಂದ ಸುಪ್ರೀಂ ಕೋರ್ಟ್... ಈ ಬೆಳಗಿನ ಪ್ರಮುಖ 10 ಸುದ್ದಿಗಳು ನಿಮಗಾಗಿ.

ವಿಧಾನಸೌಧ
ಬೆಂಗಳೂರು: ಕೆರೆಗಳ ‘ಸಂರಕ್ಷಿತ ಪ್ರದೇಶ’ದ (ಬಫರ್ ವಲಯ) ಕಡಿತಕ್ಕೆ ರಾಜ್ಯಪಾಲರ ಸಮ್ಮತಿ ದೊರೆತಿದ್ದು, ಬಫರ್ ವಲಯದ ಪ್ರಮಾಣವನ್ನು ಪರಿಷ್ಕರಿಸಿ ಸರ್ಕಾರ ಅಧಿಸೂಚಿಸಿದೆ.
ಇನ್ನು ಮುಂದೆ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದ ಒಳಗೆ ನಿಗದಿತ ಸ್ಥಳದಲ್ಲಿ ಮಾತ್ರ ಹೇಳಿಕೆಗಳನ್ನು ಪಡೆಯಬೇಕು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಗಣ್ಯರು ವಿಧಾನಸೌಧ ಪ್ರವೇಶಿಸುವಾಗ ಅವರನ್ನು ಹಿಂಬಾಲಿಸಿ ವಿಡಿಯೊ ಹೇಳಿಕೆ ಪಡೆಯಲು ಅವಕಾಶ ಇಲ್ಲ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಫರ್ಮಾನು ಹೊರಡಿಸಿದೆ.
ಕಲಬುರಗಿ: ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ನೇಮಿಸಿದ ‘ತುರ್ತು ಪರಿಹಾರ ತಂಡ’ದ ಎಂಜಿನಿಯರ್ ಒಬ್ಬರು ತಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ‘ಸ್ವಿಚ್ಡ್ ಆಫ್’ ಎಂಬ ಕಾಲರ್ ಟ್ಯೂನ್ ಸೆಟ್ ಮಾಡಿಕೊಂಡಿದ್ದಾರೆ! ಇದರಿಂದಾಗಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಬದಲು ಕರೆ ಸ್ಥಗಿತಗೊಳಿಸುತ್ತಿದ್ದಾರೆ.
ನ್ಯಾಮತಿ: ತಾಲ್ಲೂಕಿನ ಭಾಯಾಗಡ್‌ನಲ್ಲಿ ನಡೆದ ಸಂತ ಸೇವಾಲಾಲ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ, ಘೋಷಣೆ ಕೂಗಿದವರ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬಿಜೆಪಿಯ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆ ಗುರುವಾರ ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬುಧವಾರ ಅರಮನೆ ಮೈದಾನದಲ್ಲಿ ಕಾರ್ಯಕಾರಿಣಿಯ ಪೂರ್ವಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗಾರರಿಗೆ ವಿವರ ನೀಡಿದರು.
ಬೆಂಗಳೂರು: ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಕನಿಷ್ಠ ವಯಸ್ಸು 2026 ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಖಚಿತಪಡಿಸಿದೆ.
2026–27ನೇ ಸಾಲಿನಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ಈ ನಿಯಮ ಅನ್ವಯವಾಗಲಿದ್ದು, ವಯೋಮಿತಿಯಲ್ಲಿ ಸಡಿಲಗೊಳಿಸದಿರಲು ಇಲಾಖೆ ನಿರ್ಧರಿಸಿದೆ.
ನವದೆಹಲಿ : ಕೃತಕ ಬುದ್ಧಿಮತ್ತೆ (ಎ.ಐ) ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಯ ಸ್ಥಾನದಲ್ಲಿ ನಿಲ್ಲಿಸುವ ಗುರಿ ಹೊಂದಿರುವ ‘ಎ.ಐ ಇಂಪ್ಯಾಕ್ಟ್ ಶೃಂಗಸಭೆ –2026’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಲಿದ್ದಾರೆ.
ಲಖನೌ: ಉತ್ತರ ಪ್ರದೇಶದ ಗೋರಖಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದವರ ಪೈಕಿ 10 ಮಂದಿ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಅದರಿಂದಲೇ ದೃಷ್ಟಿ ಕಳೆದುಕೊಳ್ಳುವಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ಆಸ್ಪತ್ರೆಯೊಂದು ಇತ್ತೀಚೆಗೆ ಆಯೋಜಿಸಿದ್ದ ಕಣ್ಣು ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಸುಮಾರು 30 ಮಂದಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.
ನವದೆಹಲಿ: ಸಂತ್ರಸ್ತೆಯ ಸ್ತನಗಳನ್ನು ಮುಟ್ಟುವುದು ಮತ್ತು ಪೈಜಾಮಾದ ದಾರವನ್ನು ಎಳೆಯುವುದು ಕೂಡ ‘ಅತ್ಯಾಚಾರ ಯತ್ನ’ಕ್ಕೆ ಸಮಾನವಾದ ಕೃತ್ಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ರಾಜ್ಯಸಭೆ
ನವದೆಹಲಿ: ಏಪ್ರಿಲ್‌ನಲ್ಲಿ ತೆರವಾಗಲಿರುವ 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ ಬುಧವಾರ ವೇಳಾಪಟ್ಟಿ ಪ್ರಕಟಿಸಿದ್ದು, ಮಾ.16ರಂದು ಮತದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.