ಪ್ರಾತಿನಿಧಿಕ ಚಿತ್ರ
ನವದೆಹಲಿ: ಹೊಸದಾಗಿ ಕ್ಯಾಂಪಸ್‌ಗೆ ಬರುವ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು, ಆತ್ಮಹತ್ಯೆಯನ್ನು ತಡೆಗಟ್ಟಲು ಐಸ್ ಬ್ರೇಕಿಂಗ್ ಆಟಗಳು, ಅಧ್ಯಾಪಕರೊಂದಿಗೆ ಪ್ರತಿದಿನ ಬೆಳಿಗ್ಗೆ ಕಡ್ಡಾಯ ನಡಿಗೆ, ಆರೋಗ್ಯ ತಪಾಸಣೆ, ಸಮಾಲೋಚನೆ, ಒತ್ತಡ ನಿವಾರಣಾ ಕೊಠಡಿ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಲು ಐಐಟಿ ಗುವಾಹಟಿ ಯೋಜಿಸಿದೆ.
ಹಿಂದಿನ ಸೆಮಿಸ್ಟರ್‌ಗಳಲ್ಲಿ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಬಳಿಕ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು, ಹೀಗಾಗಿ ಹೊಸ ಕ್ರಮಗಳಲ್ಲಿ ಜಾರಿಗೆ ತಂದಿದೆ.
ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಸಂಸ್ಥೆಯು ಹಲವು ಯೋಜನೆಗಳನ್ನು ರೂಪಿಸಿದೆ. ವಿಶೇಷವಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಲು ‘ಸಾಥಿ ಕೌನ್ಸಲಿಂಗ್ ಕ್ಲಬ್’ಅನ್ನು ತೆರೆಯಲಾಗಿದ್ದು, ತಜ್ಞರು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸುತ್ತಾರೆ. ಹಾಸ್ಟೆಲ್‌ಗಳಲ್ಲಿ ನಿವೃತ್ತ ಸೇನಾ ಅಧಿಕಾರಿಯನ್ನು ನೇಮಿಸಲಾಗಿದ್ದು, ಅವರು ಪ್ರತಿದಿನ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಆಪ್ತ ಸಮಾಲೋಚನೆಯ ವಿಷಯಗಳನ್ನು ಗೋಪ್ಯವಾಗಿಡಲಾಗುತ್ತದೆ. ವಿದ್ಯಾರ್ಥಿಗಳು ಭಯಭೀತರಾಗದಂತೆ ಅಥವಾ ಅವರ ಗೋಪ್ಯತೆಗೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಇದರ ಜತೆಗೆ ಡಯೆಟ್ ಮೂಲಕ ಆತಂಕ ಮತ್ತು ಒತ್ತಡವನ್ನು ನಿಭಾಯಿಸಲು ನೆರವಾಗಲು ಆಹಾರ ತಜ್ಞರನ್ನು ನೇಮಿಸಲಾಗಿದೆ’ ಎಂದು ಐಐಟಿಯ ನಿರ್ದೇಶಕ ದೇವೇಂದ್ರ ಜಲಿಹಾಲ್ ಹೇಳಿದ್ದಾರೆ.
ಹೊಸದಾಗಿ ಕ್ಯಾಂಪಸ್‌ಗೆ ಬರುವ ವಿದ್ಯಾರ್ಥಿಗಳಿಗೆ ಒಂದು ವಾರ ತರಗತಿಗಳು ನಡೆಯುವುದಿಲ್ಲ, ಬದಲಾಗಿ ಹೊಂದಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದೂ ಅವರು ಪಿಟಿಐಗೆ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಐಐಟಿ ಗುವಾಹಟಿಯಲ್ಲಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಓದಿನ ಒತ್ತಡ, ಪರೀಕ್ಷೆಯ ಆತಂಕ ಸೇರಿ ಹಲವು ಕಾರಣಗಳಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಆದರೆ ಇನ್ನೂ ಪ್ರಕರಣಗಳ ತನಿಖೆ ನಡೆಯುತ್ತಿದ್ದು, ವರದಿ ಬಂದ ಮೇಲೆ ನಿಖರ ಕಾರಣ ತಿಳಿದುಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.