ADVERTISEMENT

ನೀಟ್‌ ಪರೀಕ್ಷೆ: ತಾಯಿ–ಮಗಳು ಉತ್ತೀರ್ಣ

ವಿರುಧುನಗರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದ ತಾಯಿ

ಪಿಟಿಐ
Published 31 ಜುಲೈ 2025, 15:33 IST
Last Updated 31 ಜುಲೈ 2025, 15:33 IST
   

ಚೆನ್ನೈ: ತಮಿಳುನಾಡಿನ ಮಹಿಳೆಯೊಬ್ಬರು ತಮ್ಮ 49ನೇ ವಯಸ್ಸಿನಲ್ಲಿ ಮಗಳ ಜೊತೆಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಬರೆದು ಉತ್ತೀರ್ಣರಾಗಿದ್ದಾರೆ. 

ಅಮುದವಲ್ಲಿ ಮಣಿವಣ್ಣನ್‌, 147 ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವುದಲ್ಲದೇ ವಿರುಧುನಗರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ವಿಭಾಗದಲ್ಲಿ) ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದಾರೆ. ಅವರ ಪುತ್ರಿ ಎಂ. ಸಂಯುಕ್ತಾ (ಸಿಬಿಎಸ್‌ಇ ವಿದ್ಯಾರ್ಥಿನಿ) 450 ಅಂಕಗಳನ್ನು ಗಳಿಸಿದ್ದಾರೆ.

‘ಮಗಳ ಪುಸ್ತಕವನ್ನು ಎರವಲು ಪಡೆದು ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ನನ್ನ ಶಾಲಾ ದಿನಗಳಲ್ಲಿ ಇದ್ದ ಪಠ್ಯಕ್ರಮಕ್ಕೂ ಈಗಿನ ಪಠ್ಯಕ್ರಮಕ್ಕೂ ಬಹಳ ವ್ಯತ್ಯಾಸವಿದೆ. ಈಗಿನ ಪಠ್ಯ ಕಠಿಣವಾಗಿದೆ. ಆದರೂ ಓದಲೇಬೇಕೆಂಬ ಹಟ ತೊಟ್ಟೆ. ಇದರಿಂದಾಗಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಲು ಸಾಧ್ಯವಾಯಿತು’ ಎಂದು ಎಂದು ಅಮುದವಲ್ಲಿ ತಿಳಿಸಿದ್ದಾರೆ.

ADVERTISEMENT

‘ನನ್ನ ಪತಿ ನನಗೆ ಬೆಂಬಲ ನೀಡಿ, ನೀಟ್‌ ಪರೀಕ್ಷೆ ಬರೆಯಲು ಪ್ರೋತ್ಸಾಹ ನೀಡಿದ್ದರು. ಮಗಳು ಎಸ್‌ಸಿ ಕೋಟಾದಲ್ಲಿ ಪ್ರಯತ್ನಿಸಿದ್ದಿದ್ದರೆ, ವಿರುಧುನಗರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿಯೇ ಅವಳಿಗೂ ಪ್ರವೇಶ ದೊರೆಯುತ್ತಿತ್ತು’ ಎಂದು ಹೇಳಿದ್ದಾರೆ.

‘ನಾನು ಓದಿರುವುದನ್ನು ಬೇರೆಯವರಿಗೆ ಹೇಳಿದಾಗ ನನಗೆ ನೆನಪಿಟ್ಟುಕೊಳ್ಳುವುದು ಸುಲಭವಾಗುತ್ತಿತ್ತು. ವಕೀಲರಾದ ತಂದೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಇರಲಿಲ್ಲ. ವೈದ್ಯಕೀಯ ವೃತ್ತಿಯ ಹಿನ್ನೆಲೆ ಹೊಂದಿದ್ದ ತಾಯಿಗೆ ಹೇಳುತ್ತಿದ್ದೆ. ತಾಯಿಯೊಂದಿಗೆ ಒಂದೇ ಕಾಲೇಜಿನಲ್ಲಿ ಓದಲು ನನಗೆ ಇಷ್ಟವಿಲ್ಲ. ಹೀಗಾಗಿ ಸಾಮಾನ್ಯ ಕೋಟಾದಲ್ಲಿ ಸೀಟು ಪಡೆಯುವ ಯತ್ನ ನಡೆಸಿರುವೆ. ರಾಜ್ಯದ ಹೊರಗೆ ಅಧ್ಯಯನ ಮಾಡುವ ಆಸೆಯಿದೆ’ ಎಂದು ಪುತ್ರಿ ಸಂಯುಕ್ತಾ ತಿಳಿಸಿದ್ದಾರೆ. 

ಮಗಳು ನೀಟ್‌ ಪರೀಕ್ಷೆಗೆ ತಯಾರಿ ನಡೆಸುವುದನ್ನು ನೋಡಿ ಸ್ಫೂರ್ತಿ ಪಡೆದು ನಾನೂ ಪರೀಕ್ಷೆ ಬರೆಯಬೇಕೆಂಬ ಆಸೆ ಮರುಕಳಿಸಿತು
ಅಮುದವಲ್ಲಿ ಮಣಿವಣ್ಣನ್‌ ‘ನೀಟ್‌’ನಲ್ಲಿ ಉತ್ತೀರ್ಣರಾದ ಮಹಿಳೆ

30 ವರ್ಷಗಳ ಹಿಂದಿನ ಕನಸು

30 ವರ್ಷಗಳ ಹಿಂದೆ ಎಂಬಿಬಿಎಸ್‌ ಮಾಡುವ ಆಸೆ ಹೊಂದಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಬದಲಿಗೆ ಫಿಸಿಯೊಥೆರ‍ಪಿ ಅಧ್ಯಯನ ಮಾಡಿದ್ದೆ ಎಂದು ಅಮುದವಲ್ಲಿ ಹೇಳಿದ್ದಾರೆ. ಇದೀಗ ಮಗಳೊಂದಿಗೆ ನೀಟ್‌ ಪರೀಕ್ಷೆ ಬರೆಯುವ ಮೂಲಕ ಕನಸು ನನಸಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.