ADVERTISEMENT

ತಮಿಳುನಾಡು: NEET ಪಾಸಾದ ತಾಯಿ, ಮಗಳು; ಸರ್ಕಾರಿ ಕಾಲೇಜಿನಲ್ಲಿ MBBS ಸೀಟು

ಪಿಟಿಐ
Published 31 ಜುಲೈ 2025, 6:39 IST
Last Updated 31 ಜುಲೈ 2025, 6:39 IST
<div class="paragraphs"><p>ಎಂ. ಸಂಯುಕ್ತಾ ಹಾಗೂ ಅಮುತವಲ್ಲಿ ಮಣಿವಣ್ಣನ್‌</p></div>

ಎಂ. ಸಂಯುಕ್ತಾ ಹಾಗೂ ಅಮುತವಲ್ಲಿ ಮಣಿವಣ್ಣನ್‌

   

ಎಕ್ಸ್ ಚಿತ್ರ

ಚೆನ್ನೈ: ಅಪರೂಪದ ಪ್ರಕರಣದಲ್ಲಿ ಫಿಸಿಯೊಥೆರಪಿಸ್ಟ್ ಆಗಿರುವ 49 ವರ್ಷದ ಮಹಿಳೆ ಮತ್ತು ಅವರ ಪುತ್ರಿ ವೈದ್ಯಕೀಯ ಕೋರ್ಸ್‌ ದಾಖಲಾತಿಗೆ ಅಗತ್ಯವಿರುವ ನೀಟ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.

ADVERTISEMENT

ತಾವಿರುವ ಜಿಲ್ಲೆಯಲ್ಲೇ ಇರುವ ಸರ್ಕಾರಿ ಕಾಲೇಜಿನಲ್ಲಿ ಸೀಟು ಪಡೆಯುವಲ್ಲಿ ಮಹಿಳೆ ಯಶಸ್ವಿಯಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಮಗಳೂ ತನ್ನ ಪಯಣ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

‘ತಾನು ಶಾಲೆಯಲ್ಲಿ ಕಲಿಯುವ ಸಂದರ್ಭಲ್ಲಿದ್ದ ಪಠ್ಯಕ್ಕೂ ಈಗಿನ ಪಠ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಈಗಿನದು ಬಹಳಾ ಕಷ್ಟದ ಪಠ್ಯ. ಆದರೆ ನನ್ನ ಮಗಳ ತಯಾರಿ ನನಗೂ ಪ್ರೇರಣೆಯಾಯಿತು. ಹೀಗಾಗಿ ನೀಟ್ ಪರೀಕ್ಷೆ ಎದುರಿಸಲು ನಿರ್ಧರಿಸಿದೆ. ಆಕೆಯದ್ದೇ ಪುಸ್ತಕ ಪಡೆದು ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ’ ಎಂದು ಅಮುತವಲ್ಲಿ ಮಣಿವಣ್ಣನ್‌ ಹೇಳಿದ್ದಾರೆ.

ಇವರ ಮಗಳಾದ ಎಂ. ಸಂಯುಕ್ತಾ ಅವರು ಬಾಹ್ಯ ತರಬೇತಿ ಪಡೆದಿದ್ದರು. ಅಲ್ಲಿನ ನೋಟ್ಸ್‌ಗಳೂ ತನಗೆ ನೆರವಾದವು ಎಂದಿದ್ದಾರೆ.

‘ನನ್ನ ತಂದೆ ವಕೀಲರಾಗಿದ್ದಾರೆ. ನನಗೆ ವೈದ್ಯಕೀಯ ಕೋರ್ಸ್‌ನಲ್ಲಿ ಆಸಕ್ತಿ ಇರಲಿಲ್ಲ. ಆದರೆ ತಾಯಿ ಫಿಸಿಯೊಥೆರಪಿಸ್ಟ್ ಆಗಿದ್ದಾರೆ. ಅವರ ಆಸಕ್ತಿ ಮತ್ತು ಅವರಿಗೆ ಹೇಳಿಕೊಡುತ್ತಾ ವಿಷಯದ ಮೇಲಿನ ಹಿಡಿತ ಉತ್ತಮವಾಗುತ್ತಾ ಸಾಗಿತು’ ಎಂದಿದ್ದಾರೆ ಸಂಯುಕ್ತಾ.

ಜುಲೈ 30ರಂದು ತಮಿಳುನಾಡಿನಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿ ಆರಂಭವಾಗಿದೆ. ವಿರುಧನಗರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದಾರೆ. ಅವರ ಶಾಲಾ ಶಿಕ್ಷಣ ಪೂರ್ಣಗೊಂಡು ಮೂರು ದಶಕಗಳಾಗಿವೆ. ಆಗ ವೈದ್ಯಕೀಯ ಕೋರ್ಸ್ ಸಿಗದ ಕಾರಣಕ್ಕೆ ಫಿಸಿಯೊಥೆರಪಿ ಸೇರಿದ್ದರು.

‘ಅಮ್ಮ ದಾಖಲಾದ ಕಾಲೇಜಿನಲ್ಲೇ ನಾನು ಸೇರುವುದಿಲ್ಲ. ಹೊರರಾಜ್ಯದಲ್ಲಿ ಕೋರ್ಸ್‌ ಮಾಡಬೇಕೆಂದಿದ್ದೇನೆ. ತಾಯಿ ಪರಿಶಿಷ್ಟ ಜಾತಿ ಮೀಸಲಾತಿಯಡಿ ಸೀಟು ಪಡೆದಿದ್ದಾರೆ. ಮೀಸಲಾತಿ ಇಲ್ಲದೆ ಸಾಮಾನ್ಯಳಾಗಿ ಸೀಟ್‌ ಪಡೆಯಬೇಕು ಎಂಬುದು ನನ್ನ ಹಂಬಲ’ ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

‘ನನ್ನ ಪತಿ ನಮಗೆ ಸದಾ ಬೆಂಬಲವಾಗಿದ್ದಾರೆ. ನೀಟ್ ಪರೀಕ್ಷೆ ಬರೆಯಲು ಇಬ್ಬರಿಗೂ ಅವರದ್ದೇ ಒತ್ತಾಸೆ’ ಎಂದು ಮುತುವಲ್ಲಿ ಅವರು ತಮ್ಮ ಪತಿ ಕುರಿತು ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.