ಶ್ರೀನಗರ: ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಘಟನೆ ಬೆನ್ನಲ್ಲೇ, ಪಾಕಿಸ್ತಾನ ಪ್ರಜೆಗಳನ್ನು ಗಡೀಪಾರು ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ಬಿಸಿ ಶೌರ್ಯ ಚಕ್ರ ಗೌರವಕ್ಕೆ ಪಾತ್ರರಾಗಿದ್ದ ಸೈನಿಕರೊಬ್ಬರ ತಾಯಿಗೂ ತಟ್ಟಿದೆ.
ಹುತಾತ್ಮ ಪೊಲೀಸ್ ಕಾನ್ಸ್‌ಸ್ಟೆಬಲ್ ಮುದಸಿರ್ ಅಹ್ಮದ್ ಶೇಖ್ ಅವರ ತಾಯಿ ಶಮೀಮಾ ಅಖ್ತರ್ ಅವರನ್ನು ಜಮ್ಮು–ಕಾಶ್ಮೀರ ಸರ್ಕಾರ ಗಡೀಪಾರು ಮಾಡಲಿದೆ. ದೇಶದಿಂದ ಹೊರಹಾಕಲು ಸರ್ಕಾರ ಗುರುತಿಸಿರುವ 60 ಜನರಲ್ಲಿ ಶಮೀಮಾ ಅವರೂ ಸೇರಿದ್ದಾರೆ.
ಉಗ್ರರೊಂದಿಗೆ ಹೋರಾಡುವ ವೇಳೆ, 2022ರ ಮೇನಲ್ಲಿ ಮುದಸಿರ್ ಶೇಖ್ ಅವರು ಹುತಾತ್ಮರಾಗಿದ್ದರು. ಬಾರಾಮುಲ್ಲಾ ನಗರದ ಚೌಕವೊಂದಕ್ಕೆ ‘ಶಹೀದ್ ಮುದಸಿರ್ ಚೌಕ್’ ಎಂದು ನಾಮಕರಣ ಮಾಡಲಾಗಿದೆ.
ಮುದಸಿರ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಘೋಷಿಸಲಾಗಿತ್ತು. 2023ರ ಮೇನಲ್ಲಿ ಶಮೀಮಾ– ಮೊಹಮ್ಮದ್ ಮಕ್ಸೂದ್ ದಂಪತಿ ಈ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದ್ದರು.
ಮೊಹಮ್ಮದ್ ಮಕ್ಸೂದ್ ಅವರನ್ನು 1990ರಲ್ಲಿ ಶಮೀಮಾ ಮದುವೆಯಾಗಿದ್ದರು. ಮಕ್ಸೂದ್ ಅವರು ನಿವೃತ್ತ ಪೊಲೀಸ್ ಅಧಿಕಾರಿ.
‘ಶಮೀಮಾ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಸೇರಿದವರು. ಪಿಒಕೆ ಕೂಡ ಭಾರತದ ಪ್ರದೇಶವಾಗಿದೆ. ಪಾಕಿಸ್ತಾನ ಪ್ರಜೆಗಳನ್ನು ಮಾತ್ರ ಗಡೀಪಾರು ಮಾಡಬೇಕಿತ್ತು’ ಎಂದು ಶಮೀಮಾ ಅವರ ಸಂಬಂಧಿ ಮೊಹಮ್ಮದ್ ಯೂನುಸ್ ಅಸಮಾಧಾನ ವ್ಯಕ್ತಪಡಿಸಿದರು.
‘ಉಗ್ರರೊಂದಿಗಿನ ಹೋರಾಟದಲ್ಲಿ ಮುದಸಿರ್ ಹುತಾತ್ಮನಾದ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮುದಸಿರ್ ಮನೆಗೆ ಭೇಟಿ ನೀಡಿದ್ದರು’ ಎಂದೂ ಯೂನುಸ್ ಹೇಳಿದರು.
‘ಇಲ್ಲಿಗೆ ಬಂದಾಗ ಶಮೀಮಾ 20 ವರ್ಷದವಳಿದ್ದಳು. ಕಳೆದ 45 ವರ್ಷಗಳಿಂದ ಆಕೆ ಇಲ್ಲಿ ವಾಸವಿದ್ದಾಳೆ. ಆಕೆಯನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇನೆ’ ಎಂದರು.
‘ಪಂಜಾಬ್‌ನ ವಿವಿಧ ಜಿಲ್ಲೆಗಳಲ್ಲಿ ವಾಸವಾಗಿರುವ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ, ಅವರನ್ನು ವಾಘಾ ಗಡಿಗೆ ಕರೆದೊಯ್ದು, ಪಾಕಿಸ್ತಾನ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.