ADVERTISEMENT

ಕರುಳ ಕುಡಿಗಳ ಚಿಕಿತ್ಸೆಗಾಗಿ ಅಂಗಾಂಗ ಮಾರಾಟಕ್ಕೆ ಮುಂದಾದ ತಾಯಿ!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 15:30 IST
Last Updated 21 ಸೆಪ್ಟೆಂಬರ್ 2020, 15:30 IST
ಗುಡಿಸಲ ಮುಂದೆ ಅಂಗಾಂಗ ಮಾರಾಟಕ್ಕಿದೆ ಎಂದು ಫಲಕ ಅಳವಡಿಸಿದ್ದ ಮಹಿಳೆ –ಪ್ರಜಾವಾಣಿ ಚಿತ್ರ 
ಗುಡಿಸಲ ಮುಂದೆ ಅಂಗಾಂಗ ಮಾರಾಟಕ್ಕಿದೆ ಎಂದು ಫಲಕ ಅಳವಡಿಸಿದ್ದ ಮಹಿಳೆ –ಪ್ರಜಾವಾಣಿ ಚಿತ್ರ    

ತಿರುವನಂತಪುರ: ತನ್ನ ಮಕ್ಕಳ ಚಿಕಿತ್ಸೆಗಾಗಿ ಕೇರಳದಲ್ಲಿ ತಾಯಿಯೊಬ್ಬರು ತಮ್ಮ ಎಲ್ಲ ಅಂಗಾಂಗಗಳ ಮಾರಾಟಕ್ಕೆ ಮುಂದಾಗಿದ್ದಾರೆ.

ಕೊಚ್ಚಿಯ ವರಪ್ಪುಳದಲ್ಲಿ ವಾಸಿಸುತ್ತಿರುವ ಈ ಮಹಿಳೆ ತನ್ನ ಗುಡಿಸಲ ಮುಂದೆ ಈ ಕುರಿತು ಫಲಕವನ್ನು ಅಳವಡಿಸಿದ್ದು, ‘ತನ್ನ ಮಕ್ಕಳ ವೈದ್ಯಕೀಯ ಚಿಕಿತ್ಸೆ ಹಾಗೂ ಸಾಲವನ್ನು ತೀರಿಸಲು ಹೃದಯ ಸೇರಿದಂತೆ ಎಲ್ಲ ಅಂಗಾಂಗಗಳು ಮಾರಾಟಕ್ಕಿವೆ’ ಎಂದು ಅದರಲ್ಲಿ ಬರೆದಿದ್ದಾರೆ.

ಮಹಿಳೆಯ ಇಬ್ಬರು ಹಿರಿಯ ಗಂಡುಮಕ್ಕಳುರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಮಗಳು ನರದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗಂಡನಿಂದ ದೂರವಾಗಿರುವ ಮಹಿಳೆ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಬಾಡಿಗೆ ಕಟ್ಟಲಾಗದೆ ಭಾನುವಾರ(ಸೆ.20) ಮನೆ ಬಿಟ್ಟು ಬಂದಿರುವ ಕುಟುಂಬ, ರಸ್ತೆ ಬದಿಯಲ್ಲೇ ಗುಡಿಸಲು ನಿರ್ಮಿಸಿ ವಾಸಿಸುತ್ತಿದೆ. ಭಾರಿ ಮಳೆಯ ನಡುವೆಯೇ ರಾತ್ರಿಯನ್ನು ಕಳೆದಿದೆ.

ADVERTISEMENT

‘ಹಲವು ಜನರಿಗೆ ಲಕ್ಷಾಂತರ ರೂಪಾಯಿ ಸಾಲ ಹಿಂದಿರುಗಿಸಬೇಕಾಗಿದೆ. ಮಕ್ಕಳು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಯಾವ ಕೆಲಸಕ್ಕೂ ನನಗೆ ಹೋಗಲಾಗುತ್ತಿಲ್ಲ. ನನ್ನ ಮುಂದೆ ಇನ್ಯಾವುದೇ ಆಯ್ಕೆ ಉಳಿದಿಲ್ಲ. ಹೀಗಾಗಿ ಈ ಫಲಕವನ್ನು ಅಳವಡಿಸಿದ್ದೇನೆ. ಇದು ಯಾರ ವಿರುದ್ಧದ ಪ್ರತಿಭಟನೆ ಅಲ್ಲ. ಬದಲಾಗಿ ಇದು ನನ್ನದೇ ಅಸಹಾಯಕತೆ’ ಎಂದು ಶಾಂತಿ ಅಳಲುತೋಡಿಕೊಂಡರು.

ಈ ಘಟನೆ ಸರ್ಕಾರದ ಗಮನಕ್ಕೆ ಬರುತ್ತಿದ್ದಂತೆಯೇ ಕುಟುಂಬವನ್ನು ಆಶ್ರಯ ಮನೆಗೆ ಸ್ಥಳಾಂತರಿಸಲಾಗಿದ್ದು, ಮಕ್ಕಳ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿಯೂ ಸರ್ಕಾರ ತಿಳಿಸಿದೆ. ಕುಟುಂಬದ ನಿರ್ವಹಣೆಗೆ ಆರ್ಥಿಕ ನೆರವು ನೀಡಲು ಹಲವು ಸಂಘ–ಸಂಸ್ಥೆಗಳೂ ಮುಂದೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.