ADVERTISEMENT

ಕಾದ ಕಬ್ಬಿಣದ ಬರೆಯಿಂದ ಸಾವಿಗೀಡಾದ ಹಸುಳೆ

ಮಧ್ಯಪ್ರದೇಶದಲ್ಲೊಂದು ಅಮಾನವೀಯ ಘಟನೆ

ಪಿಟಿಐ
Published 4 ಫೆಬ್ರುವರಿ 2023, 13:50 IST
Last Updated 4 ಫೆಬ್ರುವರಿ 2023, 13:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಹಡೋಲ್, ಮಧ್ಯಪ್ರದೇಶ: ಶಹಡೋಲ್ ಜಿಲ್ಲೆಯಲ್ಲಿ ಎರಡೂವರೆ ತಿಂಗಳ ಹೆಣ್ಣುಮಗುವಿನ ಮೈಮೇಲೆ ಕಾದ ಕಬ್ಬಿಣದ ಸರಳಿನಿಂದ 50ಕ್ಕೂ ಹೆಚ್ಚು ಬಾರಿ ಬರೆ ಹಾಕಿದ ಪರಿಣಾಮ, ಮಗು ಮೃತಪಟ್ಟಿರುವ ಘಟನೆ ಶನಿವಾರ ವರದಿಯಾಗಿದೆ.

‘ಪ್ರಾಥಮಿಕ ವರದಿಯ ಪ್ರಕಾರ, ಮಗು ನ್ಯೂಮೋನಿಯಾದಿಂದ ಬಳಲುತ್ತಿದ್ದು ಎನ್ನಲಾಗಿದೆ. ಆದರೆ, ಮಗುವಿನ ಸಾವಿನ ಹಿಂದಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ತಿಳಿಯಲಿದೆ’ ಎಂದು ಜಿಲ್ಲಾಧಿಕಾರಿ ವಂದನಾ ವೈದ್ಯ ತಿಳಿಸಿದ್ದಾರೆ.

ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಶಹಡೋಲ್ ಜಿಲ್ಲೆಯ ಸಿನ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಥೋಟಿಯಾ ನಿವಾಸಿಯಾಗಿರುವ ಮಗುವಿನ ತಾಯಿ ಹಾಗೂ ಆಕೆಯ ಕುಟುಂಬವು ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ನಕಲಿ ವೈದ್ಯರ ಬಳಿಗೆ ಕರೆದೊಯ್ದಿತ್ತು. ಆದರೆ, ಮಗುವಿನ ಆರೋಗ್ಯ ಸುಧಾರಿಸಿರಲಿಲ್ಲ. ಬಳಿಕ ಕುಟುಂಬವು ಮಂತ್ರವಾದಿಯೊಬ್ಬರನ್ನು ಸಂಪರ್ಕಿಸಿತ್ತು. ‘ಮಗುವಿಗೆ ಚಿಕಿತ್ಸೆ ರೂಪದಲ್ಲಿ 51 ಬಾರಿ ಕಾದ ಕಬ್ಬಿಣದ ಸರಳಿನಿಂದ ಚುಚ್ಚಿದರೆ ಗುಣವಾಗುತ್ತದೆ’ ಎನ್ನುವ ಮಂತ್ರವಾದಿಯ ಸಲಹೆಯ ಮೇರೆಗೆ ತಾಯಿ, ಮಗುವಿಗೆ ಬಿಸಿ ಕಬ್ಬಿಣದ ಸರಳಿನಿಂದ ಚುಚ್ಚಿದ್ದಳು. ಇದರಿಂದ ಮಗುವಿನ ಸ್ಥಿತಿ ಹದಗೆಟ್ಟಿತ್ತು. ಬಳಿಕ ಮಗುವನ್ನು ಶಹಡೋಲ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ADVERTISEMENT

ಗಂಭೀರವಾಗಿ ಗಾಯಗೊಂಡಿದ್ದ ಮಗು ಬುಧವಾರ ಸಾವಿಗೀಡಾಯಿತು. ಮಗುವಿನ ದೇಹವನ್ನು ಕುಟುಂಬಸ್ಥರು ಮಣ್ಣು ಮಾಡಿದ್ದರು. ಸ್ಥಳೀಯ ಮಾಧ್ಯಮವೊಂದರಿಂದ ಮಗುವಿನ ಕುರಿತು ಮಾಹಿತಿ ಪಡೆದ ಜಿಲ್ಲಾಡಳಿತವು ಮಗುವಿನ ಶವವನ್ನು ಹೊರತೆಗೆಯಲು ನಿರ್ಧರಿಸಿತು.

ಈ ಮಧ್ಯೆ ಶಹಡೋಲ್ ಜಿಲ್ಲೆಯಲ್ಲೇ 3 ತಿಂಗಳ ಹೆಣ್ಣು ಮಗುವಿನ ದೇಹದ ಮೇಲೆ ಕಾದ ಕಬ್ಬಿಣದ ಸರಳಿನ ಚಿಕಿತ್ಸೆ ನೀಡಿರುವ ಮತ್ತೊಂದು ಪ್ರಕರಣ ಶನಿವಾರ ವರದಿಯಾಗಿದೆ. ಗಾಯಗೊಂಡಿರುವ ಮಗುವನ್ನು ಶುಭಿ ಕೋಲ್ ಎಂದು ಗುರುತಿಸಲಾಗಿದೆ.

‘ಬಿರ್ಸಾ ಮುಂಡಾ ಸರ್ಕಾರಿ ವೈದ್ಯಕೀಯ ಕಾಲೇಜು– ಆಸ್ಪತ್ರೆಗೆ ಶುಭಿಯನ್ನು ಆಕೆಯ ತಂದೆ ಬುಧವಾರ ದಾಖಲಿಸಿದ್ದರು’ ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ನಾಗೇಂದ್ರ ಸಿಂಗ್ ಹೇಳಿದ್ದಾರೆ.

ಇಲ್ಲಿನ ಸಮತ್ಪುರ್ ಗ್ರಾಮದ ನಿವಾಸಿಯಾಗಿರುವ ಮಗುವಿನ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.