ADVERTISEMENT

ಮೋದಿ ಹತ್ಯೆಗೆ ಕರೆ ಕೊಟ್ಟ ಕಾಂಗ್ರೆಸ್‌ ನಾಯಕ ಪಟೇರಿಯಾ ವಿರುದ್ಧ ಎಫ್‌ಐಆರ್‌ ದಾಖಲು

ಬಿಜೆಪಿ ನಾಯಕರ ಟೀಕಾ ಪ್ರಹಾರ

ಪಿಟಿಐ
Published 13 ಡಿಸೆಂಬರ್ 2022, 3:25 IST
Last Updated 13 ಡಿಸೆಂಬರ್ 2022, 3:25 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಭೋಪಾಲ್‌: ಸಂವಿಧಾನ, ದಲಿತರು ಮತ್ತು ಅಲ್ಪಸಂಖ್ಯಾತರನ್ನುರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲಲು ತಯಾರಾಗಿ ಎಂದು ಜನರಿಗೆ ಪ್ರಚೋದನಾಕಾರಿ ಕರೆ ನೀಡುವ ಮೂಲಕ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ರಾಜ ಪಟೇರಿಯಾ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ.

ಇಂತಹ ವಿವಾದಾತ್ಮಕ ಹೇಳಿಕೆ ನೀಡಿರುವ ರಾಜ ಪಟೇರಿಯಾ ವಿರುದ್ಧ ರಾಜ್ಯ ಸರ್ಕಾರದ ಆದೇಶದ ಮೇರೆಗೆಎಫ್‌ಐಆರ್‌ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪಟೇರಿಯಾ, ‘ಮೋದಿ ಕೊಲ್ಲಲು ಸಜ್ಜಾಗಿ. ಕೊಲ್ಲುವುದೆಂದರೆ ಅವರನ್ನು ಮಣಿಸುವುದು ಎಂದರ್ಥ’ ಎಂದು ಕರೆ ಕೊಟ್ಟಿರುವ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ಬೆಳಿಗ್ಗೆ ಹರಿದಾಡಿದೆ.

ADVERTISEMENT

ಪನ್ನಾ ಜಿಲ್ಲೆಯ ಪವಾಯಿ ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪಟೇರಿಯಾ, ‘ಮೋದಿ ಚುನಾವಣೆ ಕೊನೆಗೊಳಿಸಲಿದ್ದಾರೆ.ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ವಿಭಜನೆ ಮಾಡುತ್ತಾರೆ. ದಲಿತರು, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರ ಭವಿಷ್ಯ ಅಪಾಯದಲ್ಲಿದೆ. ಸಂವಿಧಾನ ಉಳಿಯಬೇಕಿದ್ದರೆ, ಮೋದಿ ಕೊಲ್ಲಲು ಸಜ್ಜಾಗಿ, ಅಂದರೆ ಅವರನ್ನು ಸೋಲಿಸಿ’ ಎಂದಿರುವುದು ವಿಡಿಯೊದಲ್ಲಿದೆ.

‘ಭಾರತ್ ಜೋಡೊ ಯಾತ್ರೆ ಕೈಗೊಂಡಿರುವವರ ವಾಸ್ತವತೆ ಈಗ ಮುನ್ನೆಲೆಗೆ ಬರುತ್ತಿದೆ. ಮೋದಿಯವರನ್ನು ರಾಜಕಾರಣದಲ್ಲಿ ಸೋಲಿಸಲಾಗದೆ, ಕೊಲ್ಲುವ ಮಾತು ಆಡುತ್ತಿದ್ದಾರೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

‘ಇಂಥ ಹೇಳಿಕೆಗಳು ಈಗಿನ ಕಾಂಗ್ರೆಸ್‌ ಮಹಾತ್ಮಾ ಗಾಂಧಿ ಅವರ ಕಾಂಗ್ರೆಸ್‌ ಅಲ್ಲ ಎನ್ನುವುದನ್ನು ತೋರಿಸುತ್ತದೆ. ಇದು ಮುಸಲೋನಿ ಮನಸ್ಥಿತಿಯ ಇಟಲಿ ಕಾಂಗ್ರೆಸ್‌’ ಎಂದು ರಾಜ್ಯದ ಗೃಹ ಸಚಿವ ನರೋತ್ತಮ ಮಿಶ್ರಾ ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಅಧ್ಯಕ್ಷ ವಿ.ಡಿ. ಶರ್ಮಾ ಅವರು ಪಟೇರಿಯಾ ಅವರ ಈ ವಿವಾದಾತ್ಮಕ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ತನಿಖೆಗೆ ಆಗ್ರಹಿಸಿದ್ದರು.

ಬಾಕ್ಸ್‌

ಮೋದಿ ಕೊಲ್ಲಿ ಎಂದಿಲ್ಲ: ರಾಜ ಸ್ಪಷ್ಟನೆ

ತಮ್ಮ ಹೇಳಿಕೆ ವಿವಾದ ಸೃಷ್ಟಿಸಿದ ಬಳಿಕ ರಾಜ ಪಟೇರಿಯಾ, ‘ನಾನು ಇಲ್ಲಿ ಹತ್ಯೆ ಪದವನ್ನು ಮೋದಿಯವರನ್ನು ಸೋಲಿಸಬೇಕೆಂಬ ಅರ್ಥದಲ್ಲಿ ಹೇಳಿದ್ದೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಮಹಾತ್ಮ ಗಾಂಧಿಯ ಅನುಯಾಯಿ. ನಾನು ಯಾರನ್ನೂ ಕೊಲ್ಲುವ ಬಗ್ಗೆ ಮಾತನಾಡುವುದಿಲ್ಲ. ಸಂವಿಧಾನ, ದಲಿತರು, ಅಲ್ಪಸಂಖ್ಯಾತರನ್ನು ರಕ್ಷಿಸಲು ಮತ್ತು ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಧಾನಿ ಮೋದಿಯವರನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ ಎಂದಷ್ಟೇ ಹೇಳಿರುವೆ’ ಎಂದು ಸ್ಪಷ್ಟನೆನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.