ADVERTISEMENT

ನ್ಯಾಯಾಂಗ ನಿಂದನೆ ಪ್ರಕರಣ: ತಿಂಗಳೊಳಗೆ 50 ಸಸಿ ನೆಡಲು ಹೈಕೋರ್ಟ್ ಆದೇಶ

ಪಿಟಿಐ
Published 4 ಡಿಸೆಂಬರ್ 2024, 10:49 IST
Last Updated 4 ಡಿಸೆಂಬರ್ 2024, 10:49 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಜಬಲ್‌ಪುರ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕ್ಷಮೆ ಯಾಚಿಸಿದ ವ್ಯಕ್ತಿಗೆ ತಿಂಗಳೊಳಗಾಗಿ 50 ಗಿಡಗಳನ್ನು ನೆಡುವಂತೆ ಮಧ್ಯಪ್ರದೇಶ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ತನ್ನ ವಿರುದ್ಧ ಪತ್ನಿ ಹೂಡಿದ್ದ ದಾವೆಯ ವಿಚಾರಣೆ ಸಂದರ್ಭದಲ್ಲಿ ನಡೆದ ಕಲಾಪದ ಕುರಿತು ಕೆಲ ಚಿತ್ರಗಳೊಂದಿಗೆ ರಾಹುಲ್ ಸಾಹು ಎಂಬುವವರು ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಲಯದ ಕುರಿತು ಬರೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜೆಎಂಎಫ್‌ಸಿ ನ್ಯಾಯಾಲಯ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿಕೊಂಡಿತು. ನಂತರ ಪ್ರಕರಣವನ್ನು ಹೈಕೋರ್ಟ್‌ಗೆ ವರ್ಗಾಯಿಸಿತ್ತು.

ADVERTISEMENT

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಸಚ್‌ದೇವ ಹಾಗೂ ನ್ಯಾ. ವಿನಯ ಸರಾಫ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು, ಮೊರೇನಾ ಜಿಲ್ಲೆಯ ಸಂಬಾಲಗರ್‌ ಪ್ರದೇಶದಲ್ಲಿ ಕನಿಷ್ಠ 4 ಅಡಿ ಎತ್ತರವಿರುವ ದೇಶೀ ತಳಿಯ 50 ಸಸಿಗಳನ್ನು ನೆಡಬೇಕು. ಇವೆಲ್ಲವೂ ಅರಣ್ಯ ಇಲಾಖೆಯ ಉಪ ವಿಭಾಗೀಯ ಅಧಿಕಾರಿ ನಿರ್ದೇಶನದಂತೆ ನಡೆಯಬೇಕು ಎಂದು ನಿರ್ದೇಶಿಸಿತು.

ಅ. 15ರಂದು ಹೈಕೋರ್ಟ್‌ಗೆ ಸಾಹು ಪ್ರಮಾಣಪತ್ರ ಸಲ್ಲಿಸಿ, ಕ್ಷಮಾಪಣೆ ಕೋರಿದ್ದರು. ‘ನಾನು 10ನೇ ತರಗತಿವರೆಗೆ ಮಾತ್ರ ಓದಿದ್ದೇನೆ. ಕಾನೂನು ಶಿಕ್ಷಣ ಪಡೆದವನಲ್ಲ. ಕಾನೂನು ಕುರಿತು ಕನಿಷ್ಠ ಜ್ಞಾನವಿದೆ. ನ್ಯಾಯಾಲಯದ ಕಲಾಪದ ಸಂದರ್ಭದಲ್ಲಿ ಹೇಗಿರಬೇಕು ಎಂಬುದರ ಕುರಿತು ಹೆಚ್ಚಿನ ಜ್ಞಾನವಿಲ್ಲ. ಆದರೆ ನ್ಯಾಯಾಲಯ ನಿರ್ದೇಶಿಸಿದರೆ ಸಾಮಾಜಿಕ ಕಾರ್ಯದ ಮೂಲಕ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಿದ್ಧ’ ಎಂದಿದ್ದರು.

ಇದಕ್ಕೆ ಗಿಡ ನೆಡುವ ಕೆಲಸ ನೀಡಿದ ಹೈಕೋರ್ಟ್‌, ಅರಣ್ಯಾಧಿಕಾರಿಗಳು ಸೂಚಿಸಿದ ಸ್ಥಳದಲ್ಲೇ ನೆಡುವಂತೆ ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.