ADVERTISEMENT

ಭಾರತ್ ಜೋಡೊ ಯಾತ್ರೆ: ರಾಹುಲ್ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ

ಪಿಟಿಐ
Published 24 ನವೆಂಬರ್ 2022, 6:33 IST
Last Updated 24 ನವೆಂಬರ್ 2022, 6:33 IST
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ   

ಬೋರ್ಗಾಂವ್ (ಮ.ಪ್ರದೇಶ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಪಾಲ್ಗೊಂಡಿದ್ದಾರೆ.

ಭಾರತ್ ಜೋಡೊ ಯಾತ್ರೆ ಮಧ್ಯಪ್ರದೇಶಕ್ಕೆ ಪ್ರವೇಶಿಸಿದ ಎರಡನೇ ದಿನವಾದ ಗುರುವಾರ ಸಹೋದರನ ಜೊತೆಗೆ ಹೆಜ್ಜೆ ಹಾಕಿದ ಪ್ರಿಯಾಂಕಾ ಹುರುಪು ತುಂಬಿದರು. ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಜಯಘೋಷದೊಂದಿಗೆ ಹಿಂಬಾಲಿಸಿದರು.

ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೂಡಾ ಆಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪತಿ ರಾಬರ್ಟ್ ವಾದ್ರಾ ಹಾಗೂ ಪುತ್ರನೊಂದಿಗೆ ಯಾತ್ರೆಯಲ್ಲಿ ಭಾಗವಹಿಸಿದರು.

ಗುರುವಾರ ಖಾಂಡ್ವಾ ಜಿಲ್ಲೆಯ ಬೋರ್ಗಾಂವ್‌ನಿಂದ ರಾಹುಲ್ ಪಾದಯಾತ್ರೆ ಆರಂಭಿಸಿದರು.

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕೂಡ ರಾಹುಲ್ ಹಾಗೂ ಪ್ರಿಯಾಂಕಾ ಜೊತೆಗೆ ಹೆಜ್ಜೆ ಹಾಕಿದರು. ಭಾರತ್ ಜೋಡೊ ಯಾತ್ರೆಯು ಡಿಸೆಂಬರ್ 4ರಂದು ರಾಜಸ್ಥಾನವನ್ನು ಪ್ರವೇಶಿಸಲಿದೆ.

ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ (ಸುಮಾರು 3,570 ಕಿ.ಮೀ) ಭಾರತ್ ಜೋಡೊ ಯಾತ್ರೆ ಹಮ್ಮಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಯಾತ್ರೆಯು ಕರ್ನಾಟಕ ಪ್ರವೇಶಿಸಿದ್ದಾಗ ತಾಯಿ ಸೋನಿಯಾ ಗಾಂಧಿ ಸಹ ಜೊತೆಗೆ ಹೆಜ್ಜೆ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.