ADVERTISEMENT

ಕೇಂದ್ರ ಸರ್ಕಾರದಿಂದ ರೈತರ ಕಡೆಗಣನೆ; ‘ಪದ್ಮಭೂಷಣ’ ಹಿಂದಿರುಗಿಸಿದ ಸುಖದೇವ್

ಏಜೆನ್ಸೀಸ್
Published 3 ಡಿಸೆಂಬರ್ 2020, 12:43 IST
Last Updated 3 ಡಿಸೆಂಬರ್ 2020, 12:43 IST
ಸುಖದೇವ್ ಸಿಂಗ್ ದಿಂಡ್ಸಾ (ಚಿತ್ರ: ಪರ್ಮಿಂದರ್‌ ಸಿಂಗ್‌ ದಿಂಡ್ಸಾ ಫೇಸ್‌ಬುಕ್‌ ಪುಟದಿಂದ)
ಸುಖದೇವ್ ಸಿಂಗ್ ದಿಂಡ್ಸಾ (ಚಿತ್ರ: ಪರ್ಮಿಂದರ್‌ ಸಿಂಗ್‌ ದಿಂಡ್ಸಾ ಫೇಸ್‌ಬುಕ್‌ ಪುಟದಿಂದ)   

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನುಬೆಂಬಲಿಸಿರುವ ಅಕಾಲಿದಳ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಖದೇವ್ ಸಿಂಗ್ ದಿಂಡ್ಸಾ ಅವರು ತಮಗೆ ದೊರೆತಿರುವ ಪದ್ಮಭೂಷಣ ಪುರಸ್ಕಾರವನ್ನು ಹಿಂದಿರುಗಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸುಖದೇವ್‌, ‘ರೈತರು ಕಳೆದ ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರಾದರೂ ಅವರ ಮಾತನ್ನು ಆಲಿಸಲು ಕೇಂದ್ರ ಸರ್ಕಾರವು ಸಿದ್ಧವಿಲ್ಲ. ಹೀಗಾಗಿ ನಾನು ಪದ್ಮಭೂಷಣ ಪುರಸ್ಕಾರವನ್ನು ಹಿಂದಿರುಗಿಸುತ್ತಿದ್ದೇನೆ. ಯಾವಾಗ ಬಿಜೆಪಿ ಸರ್ಕಾರವು ನಮ್ಮ ಹಿರಿಯರನ್ನು ನಿರ್ಲಕ್ಷಿಸಿತೋ ಆಗ ಅವರು (ರೈತರು) ತಮ್ಮ ಹೋರಾಟವನ್ನು ದೆಹಲಿ ಗಡಿ ಪ್ರದೇಶಕ್ಕೆ ಸ್ಥಳಾಂತರಿಸಿದರು. ಈ ಪುರಸ್ಕಾರವು ನಿಷ್ಪ್ರಯೋಜಕವಾಗಿದೆ’ ಎಂದು ಹೇಳಿದ್ದಾರೆ.

ರಾಜ್ಯಸಭಾ ಸದಸ್ಯರಾಗಿರುವ ಅವರು ತಮ್ಮ ಪಕ್ಷವು ರೈತರಿಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದು, ರೈತರ ಪ್ರತಿಭಟನೆ ವೇಳೆ ಪಕ್ಷದ ರಾಜಕೀಯದ ಬಗ್ಗೆ ಚರ್ಚಿಸದಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ADVERTISEMENT

‘ನನ್ನ ಮಗ ಪರ್ಮಿಂದರ್‌ ಸಿಂಗ್‌ ದಿಂಡ್ಸಾ ಕೂಡ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ನಾನೂ ರೈತರ ಬೆಂಬಲಕ್ಕೆ ನಿಲ್ಲಲಿದ್ದೇನೆ. ಸರ್ಕಾರವು ಇಂತಹ ಕಾಯ್ದೆಗಳನ್ನು ಹಿಂಪಡೆಯದಿದ್ದರೆ, ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.

ಸುಖದೇವ್‌ ಅವರು 2019ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ಪದ್ಮಭೂಷಣ ಪುರಸ್ಕಾರ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.