ADVERTISEMENT

ಮಧ್ಯಪ್ರದೇಶ: ಬಸ್ ಕಾಲುವೆಗೆ ಮಗುಚಿ 45 ಪ್ರಯಾಣಿಕರ ದುರ್ಮರಣ

ಪಿಟಿಐ
Published 16 ಫೆಬ್ರುವರಿ 2021, 16:05 IST
Last Updated 16 ಫೆಬ್ರುವರಿ 2021, 16:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಧಿ/ರೇವಾ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಬಸ್‌ವೊಂದು ಸೇತುವೆಗೆ ಡಿಕ್ಕಿಯಾಗಿ ಕಾಲುವೆಗೆ ಬಿದ್ದ ಪರಿಣಾಮ 20 ಮಹಿಳೆಯರು ಸೇರಿ 45 ಪ್ರಯಾಣಿಕರು ಸಾವಿಗೀಡಾದ ದುರ್ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಘಟನೆಯ ಬಗ್ಗೆ ತನಿಖೆಗೆ ಮಧ್ಯಪ್ರದೇಶ ಸರ್ಕಾರ ಆದೇಶಿಸಿದೆ.

ಸಿಧಿ ಜಿಲ್ಲಾ ಕೇಂದ್ರದಿಂದ ಸುಮಾರು 80 ಕಿ.ಮೀ. ದೂರದ ಪಟ್ನಾ ಹಳ್ಳಿಯಲ್ಲಿ ಈ ದುರ್ಘಟನೆ ಬೆಳಿಗ್ಗೆ 8.30ರ ಸುಮಾರಿಗೆ ಸಂಭವಿಸಿದೆ. 50ಕ್ಕೂ ಹೆಚ್ಚು ಪ್ರಯಾಣಿಕರು ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಏಳು ಮಂದಿ ಪ್ರಯಾಣಿಕರು ಈಜಿ ದಡ ಸೇರಿದ್ದಾರೆ. ನಾಪತ್ತೆಯಾದವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಘಟನೆಯ ಬಗ್ಗೆ ಮ್ಯಾಜಿಸ್ಟ್ರೀಯಲ್‌ ತನಿಖೆಗೆ ಆದೇಶಿಸಲಾಗಿದೆ ಎಂದು ರೇವಾ ವಿಭಾಗೀಯ ಆಯುಕ್ತ ರಾಜೇಶ್‌ ಜೈನ್‌ ತಿಳಿಸಿದ್ದಾರೆ.

ಬನ್‌ಸಾಗರ ಕಾಲುವೆಯಿಂದ ಈವರೆಗೆ 45 ಶವಗಳನ್ನು ಹೊರ ತೆಗೆಯಲಾಗಿದೆ. ಇದರಲ್ಲಿ 20 ಮಹಿಳೆಯರು, 24 ಪುರಷರು ಹಾಗೂ ಒಂದು ಮಗುವಿನ ಮೃತದೇಹಗಳಿವೆ ಎಂದು ಅವರು ಜೈನ್ ತಿಳಿಸಿದ್ದಾರೆ.

ADVERTISEMENT

ಪ್ರಯಾಣಿಕರಿಂದ ತುಂಬಿದ್ದ ಈ ಬಸ್‌ ಸಿಧಿಯಿಂದ ಬಂದು, ಸತ್ನಾಕ್ಕೆ ಹೋಗುವಾಗ ಬನ್‌ಸಾಗರ ಕಾಲುವೆಗೆ ಉರುಳಿಬಿದ್ದಿದೆ ಎಂದು ರೇವಾ ವಲಯದ ಐಜಿ ಜೋಗಾ ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ, ಬಸ್‌ ಚಾಲಕನ ನಿಯಂತ್ರಣ ಕಳೆದುಕೊಂಡು ಸೇತುವೆಗೆ ಡಿಕ್ಕಿ ಹೊಡೆದು, ಕಾಲುವೆಗೆ ಉರುಳಿ ಬಿದ್ದಿದೆ.

ಪರಿಹಾರ ಘೋಷಿಸಿದ ಪ್ರಧಾನಿ
ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತಪಟ್ಟ ಪ್ರಯಾಣಿಕರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರವನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡುವುದಾಗಿ ಘೋಷಿಸಿದ್ದಾರೆ.

‘ಸಿಧಿಯಲ್ಲಿ ಸಂಭವಿಸಿದ ಬಸ್ ಅಪಘಾತ ಭೀಕರವಾದುದು. ಸ್ಥಳೀಯ ಆಡಳಿತವು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಕೈಗೊಂಡಿದೆ’ ಎಂದು ಮೋದಿ ಹೇಳಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ವೆಚ್ಚಕ್ಕಾಗಿ ತಲಾ ₹ 50 ಸಾವಿರ ಪರಿಹಾರ ನೀಡಲು ಪ್ರಧಾನಿ ಅನುಮೋದನೆ ನೀಡಿರುವುದಾಗಿ ಅವರ ಕಚೇರಿಯ ಟ್ವಿಟರ್‌ನಲ್ಲಿ ತಿಳಿಸಿದೆ.

ಮಧ್ಯಪ್ರದೇಶ ಸರ್ಕಾರದಿಂದ ತಲಾ ₹ 5 ಲಕ್ಷ
ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಅಪಘಾತದಲ್ಲಿ ಮಡಿದವರ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಅಮಿತ್ ಶಾ ಕಾರ್ಯಕ್ರಮ ರದ್ದು: ಬಸ್‌ ಕಾಲುವೆಗೆ ಬಿದ್ದು ನಾಪತ್ತೆಯಾದವರ ಹುಡುಕಾಟಕ್ಕೆ ರಾಜ್ಯ ಸರ್ಕಾರ ಸಮರೋಪಾದಿಯ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುವಿಡಿಯೊ ಕಾನ್‌ಫರೆನ್ಸ್‌ ಮೂಲಕ ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿಯಲ್ಲಿ ನಿರ್ಮಿಸಲಾದ ಒಂದು ಲಕ್ಷ ಮನೆಗಳನ್ನು ಹಸ್ತಾಂತರಿಸುವ ಸಮಾರಂಭ ಇದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.