ADVERTISEMENT

ಸಂಸದರ ಅಮಾನತು ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ: ಸಂಸತ್ತಿನ ಒಳಗೂ ಹೊರಗೂ ಧರಣಿ

ಸಂಸದರ ಅಮಾನತು ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 19:24 IST
Last Updated 1 ಡಿಸೆಂಬರ್ 2021, 19:24 IST
ಸಂಸದರ ಪ್ರತಿಭಟನೆ
ಸಂಸದರ ಪ್ರತಿಭಟನೆ   

ನವದೆಹಲಿ: 12 ರಾಜ್ಯಸಭಾ ಸದಸ್ಯರ ಅಮಾನತು ಖಂಡಿಸಿ ಸಂಸತ್ತಿನ ಒಳಗೂ, ಹೊರಗೂ ಬುಧವಾರ ಪ್ರತಿಭಟನೆ ನಡೆಯಿತು. 12 ಸಂಸದರು ಸಂಸತ್ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು. ತಮ್ಮ ಮೇಲಿನ ಅಮಾನತು ಆದೇಶವನ್ನು ವಾಪಸ್ ಪಡೆಯುವವರೆಗೂ ಪ್ರತಿಭಟನೆ ಮುಂದುರಿಸುವುದಾಗಿ ಅವರು ತಿಳಿಸಿದರು.

‘ವಿರೋಧ ಪಕ್ಷಗಳ ಸಂಸದರು ಉಭಯ ಸದನಗಳಲ್ಲಿ ಪ್ರತಿದಿನ ಬೆಳಿಗ್ಗೆ 10ರಿಂದ 11 ಗಂಟೆವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ. ಅಮಾನತು ಗೊಂಡ ಸಂಸದರು ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಗಾಂಧಿ ಪ್ರತಿಮೆ ಎದುರು ಧರಣಿ ಕೂರಲಿದ್ದಾರೆ’ ಎಂದು ಅಮಾನತುಗೊಂಡಿರುವ ಸಂಸದ ರಿಪುನ್ ಬೋರಾ ತಿಳಿಸಿದ್ದಾರೆ.

ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ದನಿ ಎತ್ತಿದ್ದಕ್ಕೆ ತಮಗೆ ಅಮಾನತು ಶಿಕ್ಷೆ ನೀಡಿದ್ದು ಏಕೆ ಎಂದು ಸಭಾಪತಿ ವೆಂಕಯ್ಯ ನಾಯ್ಡು ಅವರು ವಿವರಣೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ನಡೆ ಬದಲಿಸಿದ ಟಿಎಂಸಿ:ತೃಣಮೂಲ ಕಾಂಗ್ರೆಸ್ ಬುಧವಾರ ತನ್ನ ಕಾರ್ಯತಂತ್ರವನ್ನು ಸ್ವಲ್ಪ ಬದಲಾಯಿಸಿತು. ಸದಸ್ಯರ ಅಮಾನತು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇತರ ಪಕ್ಷಗಳೊಂದಿಗೆ ಕೈಜೋಡಿಸಿತು.

ರಾಜ್ಯಸಭೆಯಲ್ಲಿ ಗದ್ದಲ: ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳು ಭಾರಿ ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು. ಸಭಾಧ್ಯಕ್ಷರ ಪೀಠದ ಎದುರು ಜಮಾಯಿಸಿದ ಸದಸ್ಯರು, ಮಸೂದೆ ಮಂಡಿಸಲು ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಅವಕಾಶ ನೀಡಲಿಲ್ಲ.ಟಿಆರ್‌ಎಸ್ ಸದಸ್ಯರುರೈತರ ವಿಷಯ ಮುಂದಿಟ್ಟುಕೊಂಡು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.