ಶ್ರೀನಗರ: ಶೀಘ್ರದಲ್ಲೇ ಆರಂಭವಾಗಲಿರುವ ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಬಹುಹಂತದ ಭದ್ರತಾ ವ್ಯವಸ್ಥೆಯನ್ನು ರೂಪಿಸಿ, ಯಾತ್ರಾರ್ಥಿಗಳ ಸುರಕ್ಷತೆಗೆ ಸರ್ವ ಸಿದ್ದತೆ ನಡೆಸಿರುವುದಾಗಿ ಕಾಶ್ಮೀರ ಪೊಲೀಸ್ ಮುಖ್ಯಸ್ಥ ವಿ.ಕೆ.ಬಿದ್ರಿ ಬುಧವಾರ ತಿಳಿಸಿದ್ದಾರೆ.
ಅಮರನಾಥ ಯಾತ್ರಾ ಸಿದ್ದತೆ ಕುರಿತಂತೆ ಅನಂತ್‌ನಾಗ್‌ನಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ‘ಮುಂದಿನ ವಾರದಿಂದಲೇ ಅಮರನಾಥ ಯಾತ್ರೆ ಶುರುವಾಗಲಿದ್ದು, ಜಮ್ಮು–ಕಾಶ್ಮೀರ ಪೊಲೀಸ್ ಹಾಗೂ ಇತರೆ ಭದ್ರತಾ ಪಡೆಗಳು ಎಲ್ಲ ರೀತಿಯ ಸಿದ್ದತೆ ನಡೆಸಿವೆ’ ಎಂದಿದ್ದಾರೆ.
‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿಸಿದ್ದು, ಬಹುಹಂತದ ಸುರಕ್ಷತೆ ಖಾತರಿಪಡಿಸಲಾಗುತ್ತಿದೆ. 38 ದಿನಗಳ ಯಾತ್ರೆಗಾಗಿ ಭದ್ರತಾ ವ್ಯವಸ್ಥೆಗಳನ್ನೂ ವಿವಿಧ ಆಯಾಮಗಳಿಗೆ ವಿಂಗಡಿಸಲಾಗಿದೆ. ಯಾತ್ರಾ ಮಾರ್ಗದ ಪ್ರತೀ ವಲಯ, ರಸ್ತೆಗಳು, ಕ್ಯಾಂಪ್‌ಗಳ ಬಳಿ ಬುಧವಾರ ತಾಲೀಮು ನಡೆಸಲಾಗಿದೆ. ಇದರಿಂದ ಯಾವುದೇ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಲಿದೆ’ ಎಂದಿದ್ದಾರೆ.
ಪೆಹಲ್ಗಾಮ್ ಮಾರ್ಗದಲ್ಲಿರುವ ನುವಾನ್ ಬೇಸ್ ಕ್ಯಾಂಪ್‌ಗೂ ಬಿದ್ರಿ ಭೇಟಿ ನೀಡಿದ್ದು, ಅಲ್ಲಿನ ಭದ್ರತಾ ವ್ಯವಸ್ಥೆಯನ್ನೂ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.